ಹುಬ್ಬಳ್ಳಿ :ಹು-ಧಾ ಮಹಾನಗರ ಪಾಲಿಕ ಚುನಾವಣೆ ನಡೆದು ನಾಲ್ಕು ತಿಂಗಳುಗಳೇ ಕಳೆದಿದೆ. ಆದರೆ, ಈವರೆಗೂ ಮೇಯರ್,ಉಪಮೇಯರ್ ಆಯ್ಕೆ ಆಗಿಲ್ಲ. ಇದೀಗ ಸರ್ಕಾರ ಮೀಸಲಾತಿ ಘೋಷಣೆ ಮಾಡಿದ್ದೇ ತಡ ಆಕಾಂಕ್ಷಿಗಳ ದಂಡೇ ಹುಟ್ಟಿಕೊಂಡಿದೆ. ಇದರಿಂದ ಬಿಜೆಪಿ ನಾಯಕರಿಗೆ ಮೊದಲ ಪ್ರಜೆ ಆಯ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಮೀಸಲಾತಿ ಗೊಂದಲದಿಂದ ಅವಳಿ ನಗರದ ಚುನಾವಣೆ ನಡೆದು ಪಾಲಿಕೆಗೆ ಸದಸ್ಯರು ಆಯ್ಕೆ ಆದ್ರೂ ಮೇಯರ್-ಉಪಮೇಯರ್ ಆಯ್ಕೆ ಆಗಿರಲಿಲ್ಲ. ಈಗ ರಾಜ್ಯ ಸರ್ಕಾರ ಮೀಸಲಾತಿ ಗೊಂದಲ ನಿವಾರಿಸಿ ಮೇಯರ್-ಉಪಮೇಯರ್ ಆಯ್ಕೆ ಮಾಡಲು ಸೂಚಿಸಿದೆ.
ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಯನ್ನು 21ನೇ ಅವಧಿಗೆ ಸಂಬಂಧಿಸಿದಂತೆ ಮೀಸಲಾತಿ ಅನ್ವಯ ನಡೆಸುವಂತೆ ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ.
ಮೀಸಲಾತಿ ನಿಗದಿಗೊಳ್ಳುತ್ತಿದಂತೆಯೇ ಬಿಜೆಪಿಯ ಆಕಾಂಕ್ಷಿಗಳು ಮೇಯರ್, ಉಪಮೇಯರ್ ಸ್ಥಾನಕ್ಕಾಗಿ ತೆರೆಮರೆಯ ರಾಜಕೀಯ ಚುರುಕುಗೊಳಿಸಿದ್ದಾರೆ. ಫೆಬ್ರವರಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಚುನಾವಣೆ ನಡೆಯಲಿದೆ.
ಸತತ ನಾಲ್ಕನೇ ಬಾರಿ ಪಾಲಿಕೆ ಸದಸ್ಯರಾಗಿರೋ ಮಾಜಿ ಮೇಯರ್ ವೀರಣ್ಣ ಸವಡಿ ಮೇಯರ್ ಸ್ಥಾನದ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ವಿಜಯಾನಂದ ಶೆಟ್ಟಿ, ಶಿವು ಹಿರೇಮಠ, ಚಂದ್ರಶೇಖರ ಮನಗುಂಡಿ ಸೇರಿದಂತೆ ಜೆಡಿಎಸ್‌ನಿಂದ ಬಿಜೆಪಿಗೆ ವಲಸೆ ಬಂದಿರುವ ರಾಜಣ್ಣ ಕೊರವಿ ಮೇಯರ್ ಸ್ಥಾನದ ರೇಸ್‌ನಲ್ಲಿದ್ದಾರೆ. ಉಪಮೇಯರ್ ಸ್ಥಾನಕ್ಕೆ ಉಮಾ ಮುಕುಂದ, ರೂಪಾ ಶೆಟ್ಟಿ, ಮೀನಾಕ್ಷಿ ಒಂಟಮೂರಿ ಹೆಸರು ಕೇಳಿ ಬರುತ್ತಿದೆ.