ಹುಬ್ಬಳ್ಳಿ :ಕಡಲೆ ಬೀಜ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಮುಖ ವಾಣಿಜ್ಯ ಹಿಂಗಾರು ಬೆಳೆಯಾಗಿದೆ. ರೈತಾಪಿ ವರ್ಗ ಬಿತ್ತನೆ ಕಾರ್ಯ ಚುರುಕುಗೊಳಿಸಿದ್ದು, ಕಡಲೆ ಬೀಜವನ್ನು ರೈತ ಸಂಪರ್ಕ ಕೇಂದ್ರದಲ್ಲಿ ವಿತರಿಸಲಾಗುತ್ತಿದೆ. ಆದರೆ, ಸರ್ಕಾರ ವಿತರಿಸುವ ಕಡಲೆ ಬೀಜದ ದರ ದುಬಾರಿಯಾಗಿದ್ದು, ಅನ್ನದಾತರನ್ನು ಸಂಕಷ್ಟದಲ್ಲಿ ಸಿಲುಕಿಸಿದೆ.
ಮಳೆ ಅಭಾವದಿಂದ ಮುಂಗಾರು ಬೆಳೆ ಕೈ ಕೊಟ್ಟಿತ್ತು. ಈಗ ಹಿಂಗಾರು ಬೆಳೆಯಾದ ಕಡಲೆಯನ್ನು ಸಣ್ಣ ಹಾಗೂ ಅತಿ ಸಣ್ಣ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯಲು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ 2.3 ಲಕ್ಷ ಹೆಕ್ಟೇರ್ ಪ್ರದೇಶ ಕಡಲೆ ಬಿತ್ತನೆ ಗುರಿ ನಿಗದಿಪಡಿಸಲಾಗಿದೆ. ಅಲ್ಪಸ್ವಲ್ಪ ಮಳೆ ಆಗಮನದಿಂದ ಮುಂಜಾಗ್ರತೆ ಕ್ರಮವಾಗಿ ರೈತರು ಬಿತ್ತನೆಗಾಗಿ ಕಡಲೆ ಖರೀದಿಯಲ್ಲಿ ತೊಡಗಿದ್ದಾರೆ. ಜಿಲ್ಲೆಯಲ್ಲಿ 14 ರೈತ ಸಂಪರ್ಕ ಕೇಂದ್ರ ಹಾಗೂ 12 ಹೆಚ್ಚುವರಿ ಮಾರಾಟ ಕೇಂದ್ರಗಳು ಸೇರಿ 26 ಕೇಂದ್ರಗಳಲ್ಲಿ ಸಬ್ಸಿಡಿಯಲ್ಲಿ ಬೀಜ ವಿತರಿಸಲಾಗುತ್ತಿದೆ. ರೈತರಿಗೆ ಕೊರತೆಯಾಗದಂತೆ ಕ್ರಮವಹಿಸಿದ್ದು, ಬೀಜ ಗೋದಾಮಿನಲ್ಲಿ ದಾಸ್ತಾನು ಮಾಡಲಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರದಿಂದ ವಿತರಿಸುವ ಬಿತ್ತನೆ ಬೀಜದ ದರ ಕಳೆದ ವರ್ಷ ಕೆ.ಜಿಗೆ 70 ರೂ.ಗೆ ಇತ್ತು. ಪ್ರತಿ ಕ್ವಿಂಟಲ್‌ಗೆ ಕಡಲೆ ಬೀಜ 7 ಸಾವಿರ ರೂ. ಇದ್ದು, ಸಬ್ಸಿಡಿಯಾಗಿ 5 ಸಾವಿರ ರೂ. ಗೆ ದೊರೆತಿತ್ತು. ಈ ಬಾರಿ ಪ್ರತಿ ಕೆ.ಜಿಗೆ 85 ರೂ. ನಿಗದಿಪಡಿಸಲಾಗಿದೆ. ಕ್ವಿಂಟಲ್ ಬಿತ್ತನೆ ಕಡಲೆ ಬೀಜದ ದರ 8,500 ರೂ. ಆಗುತ್ತದೆ. 2,500 ರೂ. ಸಬ್ಸಿಡಿಯಾಗಿ 6,000 ರೂ. ಕ್ವಿಂಟಲ್ ಬೀಜ ನೀಡಲಾಗುತ್ತಿದೆ.
ಕಳೆದ ವರ್ಷ ರೈತ ಸಂಪರ್ಕ ಕೇಂದ್ರದಲ್ಲಿ ಪ್ರತಿ 20 ಕೆ.ಜಿ ಪಾಕೇಟ್‌ಗೆ 900 ರೂ. ನೀಡಿ ಖರೀದಿಸಲಾಗಿತ್ತು. ಈ ಬಾರಿ 1,200 ರೂ. ಸರ್ಕಾರ ದರ ನಿಗದಿಪಡಿಸಿದೆ. 300 ರೂ. ಹೆಚ್ಚಿಸುವ ಮೂಲಕ ರೈತರ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದೆ ಎಂದು ರೈತ ಮುಖಂಡ ಗುರುರಾಯನಗೌಡರ ಅಸಮಾಧಾನ ವ್ಯಕ್ತಪಡಿಸಿದರು.