ಹುಬ್ಬಳ್ಳಿ: ಕೆಎಲ್ಇ ಸಂಸ್ಥೆಗೆ ಆಸ್ತಿ ದಾನದ ಹಿಂದೆ ಹಣದ ವ್ಯವಹಾರ ಆಗಿದೆ ಅಂತಾ ನನ್ನ ಗಮನಕ್ಕೆ ಬಂದಿದೆ ಎಂದು ದಿಂಗಾಲೇಶ್ವರ ಶ್ರೀಗಳು ಹೊಸ ಬಾಂಬ್ ಸಿಡಿಸಿದ್ದಾರೆ. ನಗರದಲ್ಲಿ ನಿನ್ನೆ ರಾತ್ರಿ ಭಕ್ತರ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾರು ಹಣದ ವ್ಯವಹಾರ ಮಾಡಿದ್ದಾರೆ ಅವರು ಬಹಿರಂಗ ಪಡಿಸಬೇಕು. ನಾನು ಅದರಲ್ಲಿ ಇರಲಿಲ್ಲ, ಮಠದ ನ್ಯಾಯ ಬಗೆಹರಿಸುವಲ್ಲಿ ನಾನು ಒಬ್ಬ ಪಾತ್ರಧಾರಿಯಾಗಿದ್ದೆ ಎಂದರು.
ಆಸ್ತಿ ಹಾಳು ಮಾಡಿಸುವುದರಲ್ಲಿ, ಹಣದ ವ್ಯವಹಾರದಲ್ಲಿ ನಾನು ಇಲ್ಲ. ಮಠದ ನ್ಯಾಯ ಮುಗಿಸಲು ನಾನು 1 ಕೋಟಿ 25 ಲಕ್ಷ ಕೊಡಿಸಿದ್ದೇನೆ. ಇವರು ಆಸ್ತಿ ಹೊಡೆಯಲು ಆಗಿರುವ ವ್ಯವಹಾರ ನನಗೆ ಗೊತ್ತಿಲ್ಲ. ಹಣದ ವ್ಯವಹಾರ ಆಗಿದೆ ಅನ್ನೋದನ್ನು ಹಿರಿಯರು ನನ್ನ ಮುಂದೆ ಹೇಳಿದ್ದಾರೆ. ಹಿರಿಯರೇ ದಾನದ ಆಸ್ತಿಯ ವಿಚಾರದಲ್ಲಿನ ಹಣದ ವ್ಯವಹಾರದ ಬಗ್ಗೆ ಬಾಯಿ ಬಿಡಬೇಕು. ಇದು ಸುಳ್ಳು, ಸತ್ಯ ಅನ್ನೋದನ್ನು ಬಹಿರಂಗಪಡಿಸಬೇಕು. ಇವರು ಪ್ರಾಮಾಣಿಕರಾಗಿದ್ದರೆ ಒಂದು ಸ್ಪಷ್ಟೀಕರಣ ಕೊಡಬೇಕು ಎಂದು ಸವಾಲು ಹಾಕಿದರು.