ಧಾರವಾಡ: ಕೋವಿಡ್ ತಪಾಸಣೆಗಾಗಿ ಗಂಟಲು ದ್ರವ ಸಂಗ್ರಹಿಸಲು ಜಿಲ್ಲಾಡಳಿತ ಮೊಬೈಲ್ ವಾಹನಗಳನ್ನು ರೂಪಿಸಿದೆ. ನಾಳೆ ಹುಬ್ಬಳ್ಳಿಯ ನಾಲ್ಕು ಹಾಗೂ ಧಾರವಾಡದ ಎರಡು ಸ್ಥಳಗಳಲ್ಲಿ ಮೊಬೈಲ್ ವಾಹನ ಲಭ್ಯವಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ನಾಳೆ ಬೆಳಿಗ್ಗೆ 11 ಗಂಟೆಯಿಂದ ಸಂಜೆ 4.30ರವರೆಗೆ ಹುಬ್ಬಳ್ಳಿಯ ಈದ್ಗಾ ಮೈದಾನ, ನೆಹರು ಕ್ರೀಡಾಂಗಣ, ಮಹಾನಗರ ಪಾಲಿಕೆ ಝೋನಲ್ 10 ರ ( ಹಳೆಹುಬ್ಬಳ್ಳಿ) ಕಚೇರಿ ಹತ್ತಿರ, ಸಿದ್ದಾರೂಡ ಮಠದ ಹತ್ತಿರ ವಾಹನ ಲಭ್ಯವಿದೆ. ಹಾಗೂ ಧಾರವಾಡದ ಕಲಾಭವನದ ಹತ್ತಿರ, ಚನ್ನಬಸವೇಶ್ವರ ನಗರದ ಲಿಂಗಾಯತ ಭವನದ ಹತ್ತಿರ ಗಂಟಲು ದ್ರವ ಸಂಗ್ರಹಿಸುವ ಮೊಬೈಲ್ ವಾಹನಗಳು ನಿಲ್ಲುತ್ತವೆ.
ಕೆಮ್ಮು, ನೆಗಡಿ, ಜ್ವರ, ಸಕ್ಕರೆ ಖಾಯಿಲೆ, ಹೃದಯ ಸಂಬಂಧಿತ ಖಾಯಿಲೆ, ರಕ್ತದೊತ್ತಡ (ಬಿಪಿ) ಮತ್ತು 60 ವರ್ಷ ಮೇಲ್ಪಟ್ಟವರು ಪರೀಕ್ಷೆಗೆ ಒಳಪಡಬೇಕು. ಈ ಖಾಯಿಲೆಗಳು ಇರುವವರಿಗೆ ಮತ್ತು ಹಿರಿಯ ನಾಗರಿಕರಿಗೆ ಪ್ರತ್ಯೇಕ ಸಾಲು ಹಾಗೂ ಪ್ರಾಶಸ್ತ್ಯ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.