ಧಾರವಾಡ: ಬೀದಿ ನಾಯಿ, ಬೆಕ್ಕುಗಳನ್ನು ಸಾಮಾನ್ಯವಾಗಿ ಜನರು ತಾತ್ಸಾರಭಾವದಿಂದ ನೋಡುತ್ತಾರೆ. ಅವುಗಳಿಗೆ ಅನಾರೋಗ್ಯ ಉಂಟಾದಾಗ ನೋಡುವವರಿಲ್ಲದೆ ಸಂಕಟ ಅನುಭವಿಸುತ್ತವೆ. ಅವುಗಳನ್ನು ಆಸ್ಪತ್ರೆಗೆ ಯಾರೂ ಕರೆದೊಯ್ಯಲ್ಲ. ಈ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಮೂಕ ಪ್ರಾಣಿಗಳ ಆರೈಕೆಗಾಗಿ ಮೊಬೈಲ್ ಕ್ಲಿನಿಕ್ ಆರಂಭಿಸಲಾಗಿದೆ. ಒಂದು ಕರೆ ಮಾಡಿದ್ರೆ ಸಾಕು ಸಂಚಾರಿ ಕ್ಲಿನಿಕ್ ಸಿಬ್ಬಂದಿ ಪ್ರಾಣಿಗಳಿದ್ದಲ್ಲಿಗೆ ಬಂದು ಚಿಕಿತ್ಸೆ ನೀಡುತ್ತಾರೆ. ಅವಶ್ಯವಿದ್ದಲ್ಲಿ ಶಸ್ತ್ರಚಿಕಿತ್ಸೆಯನ್ನೂ ಕೂಡಾ ಮಾಡಲಾಗುತ್ತದೆ.
ಬೀದಿ ನಾಯಿ, ಬೆಕ್ಕುಗಳ ಆರೈಕೆಗಾಗಿ ಧಾರವಾಡದಲ್ಲಿ ಮೊಬೈಲ್ ಕ್ಲಿನಿಕ್ ಆರಂಭ - ಧಾರವಾಡದಲ್ಲಿ ಮೊಬೈಲ್ ಕ್ಲಿನಿಕ್ ಆರಂಭ
ಬೀದಿ ನಾಯಿಗಳು ಹಾಗೂ ಬೆಕ್ಕುಗಳ ಆರೈಕೆಗಾಗಿ ಧಾರವಾಡದಲ್ಲಿ ಮೊಬೈಲ್ ಕ್ಲಿನಿಕ್ ಶುರುವಾಗಿದೆ. ಹ್ಯುಮೆನ್ ಸೊಸೈಟಿ ಇಂಟರ್ ನ್ಯಾಷನಲ್ ಇಂಡಿಯಾ ಎಂಬ ಸಂಸ್ಥೆ ಈ ಸಂಚಾರಿ ಪ್ರಾಣಿ ಚಿಕಿತ್ಸಾಲಯ ಆರಂಭಿಸಿದೆ.
![ಬೀದಿ ನಾಯಿ, ಬೆಕ್ಕುಗಳ ಆರೈಕೆಗಾಗಿ ಧಾರವಾಡದಲ್ಲಿ ಮೊಬೈಲ್ ಕ್ಲಿನಿಕ್ ಆರಂಭ mobile animal clinic opening](https://etvbharatimages.akamaized.net/etvbharat/prod-images/768-512-9079172-472-9079172-1602040856654.jpg)
ಹ್ಯುಮೆನ್ ಸೊಸೈಟಿ ಇಂಟರ್ ನ್ಯಾಷನಲ್ ಇಂಡಿಯಾ ಎಂಬ ಸಂಸ್ಥೆ ಈ ಮೊಬೈಲ್ ಕ್ಲಿನಿಕ್ ಆರಂಭಿಸಿದೆ. ಇದು ಉತ್ತರ ಕರ್ನಾಟಕದಲ್ಲಿ ಮೊದಲ ಪ್ರಯೋಗ. ಆರಂಭದಲ್ಲಿ ಈ ಕ್ಲಿನಿಕ್ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಕಾರ್ಯ ನಿರ್ವಹಿಸಲಿದೆ. ಅದರಲ್ಲಿಯೂ ಪ್ರಾರಂಭಿಕ ಹಂತವಾಗಿರುವ ಹಿನ್ನೆಲೆ ಸೋಮವಾರ, ಬುಧವಾರ, ಶುಕ್ರವಾರ ಮಾತ್ರ ಕಾರ್ಯ ನಿರ್ವಹಿಸಲಿದೆ.
ನುರಿತ ಚಿಕಿತ್ಸಾ ಸಿಬ್ಬಂದಿ ಹಾಗೂ ವೈದ್ಯರು ಇರುವುದರಿಂದ ಆಯಾ ಬೀದಿ ನಾಯಿ ಇಲ್ಲವೇ ಬೆಕ್ಕು ಇರುವ ಸ್ಥಳಕ್ಕೆ ಬಂದು ಚಿಕಿತ್ಸೆ ನೀಡುತ್ತಾರೆ. ಈ ವಾಹನದಲ್ಲಿ ಬೇಸಿಕ್ ಸರ್ಜರಿ ಮಾಡುವ ವ್ಯವಸ್ಥೆಯೂ ಇದ್ದು, ಪ್ರಾಣಿಗಳ ಆರೋಗ್ಯ ರಕ್ಷಣೆಗೆ ಆಗಾಗ ಲಸಿಕೆ ಹಾಕಿಸುವ ವ್ಯವಸ್ಥೆಯಿದೆ. ಬೀದಿ ನಾಯಿಗಳ ಸಂತಾನೋತ್ಪತ್ತಿ ತಡೆಗೂ ಈ ಕ್ಲಿನಿಕ್ ಬಳಸಬಹುದಾಗಿದೆ.