ಹುಬ್ಬಳ್ಳಿ: ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು, ಆದ್ರೆ ಹಿಂಸಾಚಾರ ನಡೆಸುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಸಿಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯ ನಗರದಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ತಾನು ಮಾಡಿರುವ ತಪ್ಪನ್ನು ತಿದ್ದಿಕೊಳ್ಳುವವರೆಗೂ ಈ ಪ್ರತಿಭಟನೆ ನಡೆಯಲಿದೆ. ಮುಸ್ಲಿಂ ಬಾಂಧವರಿಗೆ ಯಾವುದೇ ಹೆದರಿಕೆ ಇಲ್ಲ. ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋಗಿದೆ. ಅನುಭವ ಇಲ್ಲದೆ ಇರುವವರು ಅಧಿಕಾರಕ್ಕೆ ಬಂದರೆ ದೇಶದ ಸ್ಥಿತಿ ದುಸ್ಥಿತಿಗೆ ಬರಲಿದೆ ಎಂದು ವಾಗ್ದಾಳಿ ನಡೆಸಿದರು.
ದೇಶದಲ್ಲಿ ಇಂದಿನ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಜನ ಏಕ ಕಂಠದಿಂದ ಹೋರಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಈಗಾಗಲೇ ಮಂಗಳೂರಲ್ಲಿ ಪೊಲೀಸರ ಗುಂಡಿಗೆ ಇಬ್ಬರು ಬಲಿಯಾಗಿದ್ದಾರೆ. ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇನೆ. ಎನ್ಆರ್ಸಿ ಬಗ್ಗೆ ಜನತೆಗೆ ಸ್ಪಷ್ಟವಾಗಿ ತಿಳಿಸುವುದು ಸರ್ಕಾರದ ಕರ್ತವ್ಯ, ಪ್ರತಿಯೊಬ್ಬರಿಗೂ ಎನ್ಆರ್ಸಿ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಅದರ ಬಗ್ಗೆ ಸ್ಪಷ್ಟತೆ ಇಲ್ಲದಿರುವುದರಿಂದ ದೇಶದೆಲ್ಲೆಡೆ ಭಯ ಹುಟ್ಟಿದೆ. ಈ ಹಿಂದೆ ಆರ್ಎಸ್ಎಸ್ನವರು ಅಖಂಡ ಭಾರತದ ಬಗ್ಗೆ ಮಾತನಾಡುತ್ತಿದ್ದರು. ಆದ್ರೆ ಇತ್ತೀಚೆಗೆ ಅದನ್ನು ಕೈಬಿಟ್ಟಿದ್ದಾರೆ ಎಂದರು.
ರೊಹಿಂಗ್ಯಾಗಳ ಬಗ್ಗೆ ನಾನು ಏನು ಮಾತನಾಡುವುದಿಲ್ಲ, ಬೇರೆ ದೇಶದ ಚಿಂತೆ ನಮಗೆ ಬೇಡ, ನಮ್ಮ ದೇಶದಲ್ಲಿ ಏನಾಗುತ್ತಿದೆ ಎಂಬುದು ಮುಖ್ಯ. ನಮಗೆ ಇಲ್ಲೇ ಖಬರಸ್ಥಾನ ಇದೆ. ಸತ್ತವರಿಗೆ ಇಲ್ಲಿ ಜಾಗ ಸಿಗುತ್ತಿಲ್ಲ, ಅಂತಹದರಲ್ಲಿ ಹುಟ್ಟಿದ್ದು ಎಲ್ಲಿ ಅಂತ ದಾಖಲೆ ಕೇಳಿದ್ರೆ ಎಲ್ಲಿಂದ ತರೋದು. ಬಸವರಾಜ ಬೊಮ್ಮಾಯಿ ಯುಟಿ ಖಾದರ್ ಮೇಲೆ ಪ್ರಕರಣ ದಾಖಲಿಸಿದ್ದೀರ, ಸಿಟಿ ರವಿ ಮೇಲೆ ಯಾಕೆ ಕೇಸ್ ದಾಖಲಿಸಿಲ್ಲ ಇಂತಹದನ್ನು ದಯವಿಟ್ಟು ಮಾಡಬೇಡಿ ಎಂದು ಮನವಿ ಮಾಡಿದರು.