ಧಾರವಾಡ: ಜಿಪಂ ಸದಸ್ಯ ಯೋಗೇಶ್ ಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ಹಿನ್ನೆಲೆ ಅವರ ನಿವಾಸಕ್ಕೆ ಕಾಂಗ್ರೆಸ್ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿನಯ್ ಬಂಧನ ರಾಜಕೀಯ ಪ್ರೇರಿತ. ಸಿಬಿಐ ತನಿಖೆಯ ಅವಶ್ಯಕತೆ ಇಲ್ಲವೆಂದು ಹೈಕೋರ್ಟ್ ಹೇಳಿತ್ತು. ಪೊಲೀಸರ ತನಿಖೆ ಅಂತಿಮ ಹಂತದಲ್ಲಿತ್ತು. ಆದರೆ, ರಾಜ್ಯ ಸರ್ಕಾರ ತನಿಖೆಯನ್ನು ಸಿಬಿಐಗೆ ನೀಡಿದೆ ಎಂದರು.
ಮಾಜಿ ಸಚಿವ ವಿನಯ್ ಕುಲಕರ್ಣಿ ಮನೆಗೆ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್.. ಬಿಜೆಪಿಯವರು ಕಾನೂನು ಉಲ್ಲಂಘಿಸಿ ವಿರೋಧಿಗಳ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ವಿನಯ್ ಕುಕಲರ್ಣಿ, ಪ್ರಹ್ಲಾದ್ ಜೋಶಿ ವಿರುದ್ಧ ಸ್ಪರ್ಧೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ವಿನಯ್ ವಿರುದ್ಧ ಸಿಬಿಐ ಅಸ್ತ್ರ ಬಳಸಲಾಗಿದೆ. ಅದಕ್ಕೆ ಇಂಥ ಕೆಲಸ ಮಾಡಿಸುತ್ತಿದ್ದಾರೆ ಎಂದು ದೂರಿದರು.
ಶಿರಾ, ಆರ್‌ಆರ್‌ನಗರ ಬೈ ಎಲೆಕ್ಷನ್ ಫಲಿತಾಂಶ ಕುರಿತು ಮಾತನಾಡಿದ ಅವರು, ಆರ್ಆರ್ನಗರದಲ್ಲಿ ಗೆದ್ದಿದ್ದು ಮುನಿರತ್ನ, ಬದಲಿಗೆ ಬಿಜೆಪಿಯಲ್ಲ. ಮುನಿರತ್ನ ಕೋವಿಡ್ ವೇಳೆ ಕೆಲಸ ಮಾಡಿದ್ದಾರೆ. ಅವರೊಂದಿಗೆ ಕೈ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುನಿರತ್ನ ಗೆದ್ದಿದ್ದಾರೆ. ನಾವು ಹೀನಾಯವಾಗಿಯೇನೂ ಸೋತಿಲ್ಲ. ರಾಜಕಾರಣದಲ್ಲಿ ಸೋಲು, ಗೆಲುವು ಇರೋದೇ ಎಂದರು.