ಧಾರವಾಡ : ಡಿಸೆಂಬರ್ 15ರವರೆಗೆ ಪರಿಷತ್ ಸದನ ನಡೆಯಬೇಕಿತ್ತು, ಒಮ್ಮಿಂದೊಮ್ಮೆಲೆ ಸದನ ನಿಲ್ಲಿಸಿದ್ದಾರೆ. ಇದು ನೋವಿನ ಸಂಗತಿ, ಕರ್ನಾಟಕದ ಇತಿಹಾಸದಲ್ಲಿ ಮೊದಲು ಇಂತಹ ಸಮಸ್ಯೆ ಉದ್ಭವಿಸಿದೆ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸರ್ಕಾರ ತೀರ್ಮಾನ ಮಾಡಿದಂತೆ ಸಭಾಪತಿಯ ಕರ್ತವ್ಯ ಆಗಿದೆ. ಸರ್ಕಾರವೇ ಈಗ ಸದನದ ಅವಧಿ ಮೊಟಕುಗೊಳಿಸಿದೆ. ಮುಂದೆ ಸದನ ನಡೆಸುವುದಕ್ಕೆ ತಾಂತ್ರಿಕ ತೊಂದರೆ ಇದೆಯಾ ನೋಡಬೇಕಿದೆ. ಈಗ ಸದನ ಪುನರ್ ಆರಂಭಿಸಲು ರಾಜ್ಯಪಾಲರು ತೀರ್ಮಾನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಇದು ಕಾಂಗ್ರೆಸ್ - ಬಿಜೆಪಿ ಮಧ್ಯೆ ಪರಿಷತ್ ಸಭಾಪತಿ ಕುರ್ಚಿಗಾಗಿ ನಡೆದ ಗಲಾಟೆ. ಈ ಹಿಂದೆ ಶಂಕರಮೂರ್ತಿ ಸಭಾಪತಿ ಆಗಿದ್ದಾಗ ಹೀಗೆ ಆಗಿತ್ತು, ಆಗ ಅವರು ಉಪಾಧ್ಯಕ್ಷರಿಂದ ಸದನ ನಡೆಸಿದ್ದರು. ತಾವು ಕೆಳಗೆ ಕುಳಿತು ಅವಿಶ್ವಾಸ ಎದುರಿಸಿದ್ದರು. ಈಗ ಅವಿಶ್ವಾಸ ಕೊಟ್ಟಾಗ ಸಭಾಪತಿ, ಉಪಾಧ್ಯಕ್ಷರಿಗೆ ಸದನ ಬಿಟ್ಟು ಕೊಡಬೇಕಿತ್ತು. ಸಭಾಪತಿ ಬಿಲ್‌ವೊಂದರ ಚರ್ಚೆ ನಡೆದಾಗ ಮುಗಿಯುವರೆಗೂ ಸಭೆ ನಿಲ್ಲಿಸಬಾರದು. ಆದರೆ, ಒಂದು ಬಿಲ್‌ವೊಂದರ ಚರ್ಚೆ ನಡೆದಾಗ ಅವರು ಸಭೆ ನಿಲ್ಲಿಸಿದ್ದರು. ಹೀಗಾಗಿಯೆ, ಅವರ ವಿರುದ್ಧ ಅವಿಶ್ವಾಸ ಮಾಡಿದ್ದಾರೆ, ನಾವು ಕೂಡ ಅದನ್ನು ಬೆಂಬಲಿಸುವ ಪ್ರಸಂಗ ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಇದನ್ನೂ ಓದಿ : 'ಸಿದ್ದರಾಮಯ್ಯ, ಡಿಕೆಶಿ ನಿರುದ್ಯೋಗಿಗಳಾಗಿ ರೈತರನ್ನು ಎತ್ತಿ ಕಟ್ಟುತ್ತಿದ್ದಾರೆ'
ಗೋಹತ್ಯೆ ನಿಷೇಧ ಕಾಯ್ದೆ ಪರಿಷತ್ನಲ್ಲಿ ಚರ್ಚೆ ಆಗಿಲ್ಲ, ಗೋಹತ್ಯೆಗೆ ಅನೇಕ ಕಾರಣಗಳಿವೆ. ನಾನು 262 ಜಾನುವಾರು ಹೊಂದಿದ್ದೇನೆ, ಎಲ್ಲವನ್ನೂ ಇಟ್ಟುಕೊಳ್ಳಲು ಆಗುವುದಿಲ್ಲ. ಕೆಲವೊಂದನ್ನು ಮಾರುತ್ತೇವೆ, ನಮ್ಮಿಂದ ತೆಗೆದುಕೊಂಡವರು ಕಟುಕರಿಗೆ ಕೊಡಬಹುದು. ಕರುಗಳನ್ನು ಕೊಡಬಾರದು, ಮುದಿ ಹಸುಗಳನ್ನು ಕೊಡಬಹುದು ಎಂದು ಮೊದಲು ಇತ್ತು. ಈಗಿನ ಕಾಯ್ದೆಯ ಸಾಧಕ ಬಾಧಕ ಏನಿದೆ ನೋಡಬೇಕು ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ ಸಾಕಷ್ಟು ಗೋ ಶಾಲೆಗಳಿವೆ, ಆದರೆ ನಮ್ಮಲ್ಲಿ ಗೋ ಶಾಲೆಗಳಿಲ್ಲ. ಕಾಯ್ದೆ ತರುವ ಮುಂಚೆ ರಾಜ್ಯ ಸರ್ಕಾರ ಪೂರ್ವ ತಯಾರಿ ಮಾಡಬೇಕಿತ್ತು. ಯುಪಿಯಲ್ಲಿ ಒಂದು ಹಸುವಿಗೆ ದಿನವೊಂದಕ್ಕೆ 30 ರೂಪಾಯಿ ಖರ್ಚು ಮಾಡಲಾಗುತ್ತದೆ, ನಮ್ಮಲ್ಲಿ ಅದು ಇಲ್ಲ. ಗೋ ರಕ್ಷಣೆ ಮಾಡುವವರಿಗೆ ಯಾವುದೇ ಕೇಸ್ ಹಾಕಬಾರದು, ಆದರೆ, ಅವರು ಏನು ಮಾಡುತ್ತಾರೋ ಅದರ ಮೇಲೆ ನಿಗಾ ಇಡಬೇಕು. ಕುರಿ, ಕೋಳಿ ಎಲ್ಲವನ್ನೂ ಕುಯ್ತಾರೆ, ಆಕಳಿಗೆ ನಾವು ಗೋಮಾತೆ ಅಂತೀವಿ. ದೇಸಿ ಆಕಳನ್ನು ಮಾತ್ರ ದೇವರಂತೆ ನೋಡ್ತೇವಿ, ಹೆಚ್‌ಎಫ್ ಮತ್ತು ಜೆರ್ಸಿಯನ್ನು ದೇವರಂತೆ ನೊಡಲ್ಲ ಎಂದರು.
ಸಾರಿಗೆ ನೌಕರರ ಮುಷ್ಕರದ ಬಗ್ಗೆ ಮಾತನಾಡಿ, ಸಾರಿಗೆ ಸಂಸ್ಥೆಯವರನೆಲ್ಲ ಸರ್ಕಾರಿ ನೌಕರರನ್ನಾಗಿ ಮಾಡಿ ಅಂದ್ರೆ ಹೇಗೆ..? ನಿಗಮಗಳ ನಿರ್ವಹಣೆಗೆ ಸರ್ಕಾರ ಅನುದಾನ ಮಾತ್ರ ಕೊಡುತ್ತದೆ. ಅನುದಾನಿತ ಶಾಲೆಗಳನ್ನು ಸರ್ಕಾರಿ ಮಾಡಿ ಅಂತೀವಿ. ನಾಳೆ ಹೆಸ್ಕಾಂನವರು ಸರ್ಕಾರಿ ನೌಕರರನ್ನಾಗಿ ಮಾಡಿ ಅಂತಾರೆ ಆಗುತ್ತಾ..? ಎಂದು ಪ್ರಶ್ನಿಸಿದರು.