ಹುಬ್ಬಳ್ಳಿ: ರಾಜ್ಯದಲ್ಲಿ ನಿರಂತರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದೆ. ಕಳೆದ ಬಾರಿಯೇ ಎಚ್ಚೆತ್ತು ಅಗತ್ಯ ಕ್ರಮ ತೆಗೆದುಕೊಳ್ಳುವುದನ್ನು ಬಿಟ್ಟು ಮತ್ತೆ ಯಥಾಸ್ಥಿತಿ ನಿರ್ಮಾಣವಾಗಿರುವುದನ್ನು ನೋಡಿದ್ರೆ, ಸರ್ಕಾರ ಪ್ರವಾಹ ನಿಯಂತ್ರಣದಲ್ಲಿ ವಿಫಲವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷವೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಆಗಲೂ ಪ್ರವಾಹಕ್ಕೆ ಅಪಾರ ಹಾನಿ ಉಂಟಾಗಿತ್ತು. ಇದೀಗ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ. ಗುಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡುವ ಕೆಲಸ ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು.
ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ₹5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ ₹50 ಸಾವಿರ ಕೊಟ್ಟು ಮೂಗಿಗೆ ತುಪ್ಪ ಒರೆಸಲು ಮುಂದಾಗಿದೆ. ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಕ್ಯಾಬಿನೆಟ್‌ನ ಬೆರಳೆಣಿಕೆಯಷ್ಟು ಸಚಿವರನ್ನು ಬಿಟ್ಟರೆ, ಮತ್ಯಾರು ಅತಿವೃಷ್ಟಿ ಸ್ಥಳಕ್ಕೆ ಭೇಟಿ ನೀಡಿಲ್ಲ. ಎಲ್ಲರೂ ಕ್ವಾರಂಟೈನ್ನಲ್ಲಿದ್ದಾರೆ ಎಂದು ಕಿಡಿಕಾರಿದರು.
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ರಾಷ್ಟ್ರೀಯ ನೂತನ ಶಿಕ್ಷಣ ನೀತಿ, ಲೋಪದೋಷಗಳಿವೆ :ರಾಷ್ಟ್ರೀಯ ನೂತನ ಶಿಕ್ಷಣ ನೀತಿಯನ್ನು ಸ್ವಾಗತ ಮಾಡುತ್ತೇನೆ. ಮಾತೃ ಭಾಷೆಯಲ್ಲಿ ಶಿಕ್ಷಣ ಕಲಿಸುವುದು ಒಳ್ಳೆಯ ವಿಚಾರ. ಆದರೆ, ಕೆಲ ಲೋಪದೋಷಗಳಿವೆ ಇದರಲ್ಲಿವೆ. ಅದನ್ನು ಸರಿಪಡಿಸಲು ನಮಗೆ ಆಮಂತ್ರಣ ನೀಡಿದರೆ, ನಾವು ಸಹ ಚರ್ಚೆ ನಡೆಸಿ ಕೆಲ ಮಾರ್ಪಾಡು ಹಾಗೂ ಸಲಹೆ-ಸೂಚನೆಗಳನ್ನ ನೀಡುತ್ತೇವೆ ಎಂದರು.