ಹುಬ್ಬಳ್ಳಿ: ಕೊರೊನಾ ವೈರಸ್ ಜನರು ಭಾವಿಸಿರುವಂತೆ ಮಹಾಮಾರಿ ರೋಗವಲ್ಲ. ಹಾಗಂತ ಈ ಕುರಿತು ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿದ್ದಾರೆ.
ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿ ನಿನ್ನೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆಗೆ ಹಿಂದಿರುಗುವ ವೇಳೆ ಮಾತನಾಡಿದ ಅವರು, ಜನರಲ್ಲಿ ಮಾಹಿತಿ ಕೊರತೆ ಹಾಗೂ ತಪ್ಪು ತಿಳಿವಳಿಕೆಯಿಂದಾಗಿ ಕೊರೊನಾ ವೈರಸ್ ಭಯಾನಕ ಕಾಯಿಲೆ ಎಂದು ಎಲ್ಲೆಡೆ ಬಿಂಬಿತವಾಗಿದೆ. ಕಡ್ಡಾಯ ಮಾಸ್ಕ್, ಸ್ಯಾನಿಟೈಸರ್ ಬಳಕೆ ಹಾಗೂ ಸಾಮಾಜಿಕ ಅಂತರ ಪಾಲನೆ ಮೂಲಕ ಸಮುದಾಯದಲ್ಲಿ ಸೋಂಕು ಹರಡುವಿಕೆಯನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.
ಕೊರೊನಾ ಸೋಂಕು ದೃಢಪಟ್ಟಾಗ ಆರಂಭದಲ್ಲಿ ನಾನೂ ಸಹ ಸಾಮಾನ್ಯರಂತೆ ಸಹಜವಾಗಿ ಆತಂಕಕ್ಕೆ ಒಳಗಾಗಿದ್ದೆ. ಆದರೆ ಕಿಮ್ಸ್ನಲ್ಲಿನ ಉತ್ತಮ ಚಿಕಿತ್ಸೆ, ವೈದ್ಯರ ಸಲಹೆ, ಮಾರ್ಗದರ್ಶನದಿಂದಾಗಿ ಕೊರೊನಾ ಸೋಂಕು ಹೊರಗಿನ ಜನರು ತಿಳಿದುಕೊಂಡಷ್ಟು ಭಯಾನಕವಲ್ಲ ಎಂಬ ಭಾವನೆ ಮೂಡಿತು. ಇದು ಸಾಮಾನ್ಯ ಜ್ವರ, ಶೀತದಷ್ಟೇ ಕಾಯಿಲೆಯಾಗಿದ್ದು, ಜನರು ಕೊರೊನಾ ಕುರಿತಾಗಿ ಅನಗತ್ಯ ಆತಂಕ ಪಡಬೇಕಿಲ್ಲ ಎಂದರು.