ಹುಬ್ಬಳ್ಳಿ:ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರದ ಕುರಿತು ಮಾತನಾಡಲು ಕುಂದಗೋಳ ಕ್ಷೇತ್ರದ ಶಾಸಕಿ ಕುಸುಮಾವತಿ ಶಿವಳ್ಳಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಬಂದಿದ್ದರು. ಸತತ ಒಂದೂವರೆ ಗಂಟೆಗಳ ಕಾಲ ಕಳೆದರು ಕೂಡ ಬೊಮ್ಮಾಯಿ ಮಾತ್ರ ಭೇಟಿ ಮಾಡದೆ ತೆರಳಿರುವುದು ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.
ಇಂದು ಬೆಳಗ್ಗೆ ಹುಬ್ಬಳ್ಳಿಯ ಆದರ್ಶ ನಗರದಲ್ಲಿನ ಸಿಎಂ ನಿವಾಸಕ್ಕೆ ಆಗಮಸಿದ್ದ ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ, ತಮ್ಮ ಕ್ಷೇತ್ರದ ಅಭಿವೃದ್ಧಿಯ ವಿಚಾರಕ್ಕೆ ಮಾತನಾಡಲು ಸಿಎಂ ಭೇಟಿ ಮಾಡಲು ಬಂದಿದ್ದರಂತೆ. ಆದರೆ ಸಿಎಂ ಬೊಮ್ಮಾಯಿ ಅವರು ಮನೆಗೆ ಬಂದರೂ ಕೂಡ ಭೇಟಿಯಾಗದೆ ಬೆಳಗಾವಿ ಕಡೆ ಪ್ರಯಾಣ ಬೆಳೆಸಿದ್ದಾರೆ. ಸತತ ಒಂದೂವರೆ ಗಂಟೆಗಳ ಕಾಲ ಕಾದು ಕುಳಿತರೂ ಸಹ ಅವರು ಭೇಟಿ ಅಗಲಿಲ್ಲ ಎಂದು ಕಾಂಗ್ರೆಸ್ ಶಾಸಕಿ ಶಿವಳ್ಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಸಕಿ ಕುಸುಮಾವತಿ ಶಿವಳ್ಳಿ ಸ್ಪಷ್ಟನೆ:ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಮಾತನಾಡಲು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲು ಬಂದಿದ್ದೆ. ಇದಕ್ಕೆ ಯಾವುದೇ ಬೇರೆ ಅರ್ಥ ಕಲ್ಪಿಸುವುದು ಬೇಡ. ಆದರೆ ಸಿಎಂ ಬೊಮ್ಮಾಯಿ ಅವರು ನನ್ನನ್ನು ಭೇಟಿ ಆಗಲಿಲ್ಲ ಎಂದು ಅಸಮಾಧಾನ ಹೊರ ಹಾಕಿದರು. ಇದೇ ವೇಳೆ ಕುಂದಗೋಳ ಟಿಕೆಟ್ ಆಕಾಂಕ್ಷಿಗಳಿಗೆ ಶಾಸಕಿ ಕುಸುಮಾವತಿ ಶಿವಳ್ಳಿ ಟಾಂಗ್ ಕೊಟ್ಟರು.
ಕುಂದಗೋಳ ಕ್ಯಾಂಡಿಡೇಟ್ ನಾನೇ. ಯಾರು ಏನೇ ಮಾಡಿದ್ರು ಟಿಕೆಟ್ ತಪ್ಪಿಸಲು ಆಗೋದಿಲ್ಲ. ಕುಂದಗೋಳ ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಮತ ಇಲ್ಲ. ಕುಂದಗೋಳ ಕಾಂಗ್ರೆಸ್ ಭಿನ್ನಮತವನ್ನು ಸಮರ್ಥಿಸಿಕೊಂಡ ಅವರು, ಭಿನ್ನಮತದಿಂದಾಗಿ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮ ರದ್ದಾಗಿಲ್ಲ. ಕಲಘಟಗಿಯಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ಇಂದೇ ಆಯೋಜನೆ ಮಾಡಲಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸಮಯದ ಅಭಾವ ಇದ್ದ ಕಾರಣ ಪ್ರಜಾಧ್ವನಿ ಕಾರ್ಯಕ್ರಮ ರದ್ದಾಗಿದೆ ಅಷ್ಟೇ ಎಂದು ಅವರು ಸ್ಪಷ್ಟನೆ ನೀಡಿದರು.