ಧಾರವಾಡ:ರಾಷ್ಟಪತಿ ದ್ರೌಪದಿ ಮುರ್ಮು ಅವರಿಂದ ಕಳೆದ ವರ್ಷವಷ್ಟೇ ಉದ್ಘಾಟನೆಯಾಗಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ್ಲಿ (ಐಐಐಟಿ) ನೀರಿನ ಕೊರತೆ ಉಂಟಾಗಿದೆ. ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಧಾರವಾಡ ಹೊರವಲಯದ ಇಟ್ಟಿಗಟ್ಟಿ ಬಳಿ ಇರುವ ಐಐಐಟಿ ಕ್ಯಾಂಪಸ್ನಲ್ಲಿ ಪ್ರತಿಭಟಿಸಿದ ವಿದ್ಯಾರ್ಥಿಗಳು, "ಕಳೆದೊಂದು ವಾರದಿಂದ ನೀರಿನ ಸಮಸ್ಯೆ ಉದ್ಭವಿಸಿದೆ. ಸರಿಯಾಗಿ ನೀರು ಪೂರೈಕೆಯಾಗಿಲ್ಲ. ಐಐಐಟಿ ಆಡಳಿತ ಮಂಡಳಿ ಕೂಡ ಪರ್ಯಾಯ ವ್ಯವಸ್ಥೆ ಮಾಡಿಲ್ಲ" ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಸೆ.26 ರಂದು ರಾಷ್ಟ್ರಪತಿಗಳಿಂದ ಧಾರವಾಡ ಐಐಐಟಿ ನೂತನ ಕ್ಯಾಂಪಸ್ ಉದ್ಘಾಟನೆ
ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಅರವಿಂದ ಬೆಲ್ಲದ್, "ನೀರಿನ ಕೊರತೆ ಉಂಟಾಗಿರುವ ಮಾಹಿತಿ ತಿಳಿದು ಬಂದಿದೆ. ಎಲ್ ಆ್ಯಂಡ್ ಟಿ ಅಧಿಕಾರಿಗಳಿಗೆ ಕರೆ ಮಾಡಿದ್ದೇನೆ. ಅಧಿಕಾರಿಗಳು ಕರೆ ಸ್ವೀಕರಿಸಿಲ್ಲ. ಇದು ಎಲ್ ಆ್ಯಂಡ್ ಟಿ ಅಧಿಕಾರಿಗಳ ಬೇಜವಾಬ್ದಾರಿತನವನ್ನು ತೋರಿಸುತ್ತದೆ. ಜಲಮಂಡಳಿ ಅಧಿಕಾರಿಗಳು ನಿರ್ವಹಣೆ ಮಾಡುವಾಗ ಇಂತಹ ಸಮಸ್ಯೆ ಎದುರಾಗಿಲ್ಲ. ಕ್ಯಾಂಪಸ್ನಲ್ಲಿ ನೀರು ಅತಿ ಅವಶ್ಯಕ. ಜಿಲ್ಲಾಧಿಕಾರಿ ಸೇರಿದಂತೆ ಎಲ್ ಆ್ಯಂಡ್ ಟಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತೇನೆ" ಎಂದು ಅವರು ತಿಳಿಸಿದರು.