ಹುಬ್ಬಳ್ಳಿ/ಧಾರವಾಡ: ಕೋವಿಡ್ ಬಿಎಫ್-7 ಉಪತಳಿಯನ್ನು ನಿಯಂತ್ರಣ ಮಾಡಲು ಸರ್ಕಾರ ಸಕಲ ರೀತಿಯಲ್ಲಿ ಸರ್ವಸಿದ್ದತೆ ಮಾಡಿಕೊಂಡಿದೆ. ಅದಾಗ್ಯೂ ಸೋಂಕಿನಿಂದ ತೊಂದರೆ ಉಂಟಾದರೆ ಅದಕ್ಕೆ ಬೇಕಾದ ರಕ್ಷಣೆ, ಚಿಕಿತ್ಸೆ ಕೊಡುವ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ನಗರದ ಕಿಮ್ಸ್ ಆಸ್ಪತ್ರೆಗೆ ಕೊರೊನಾ ಮಾಕ್ ಡ್ರಿಲ್ ಹಿನ್ನೆಲೆಯಲ್ಲಿ ಭೇಟಿ ನೀಡಿ ಮಾತನಾಡಿದ ಅವರು, ಇಂದು ಆರೋಗ್ಯ ವ್ಯವಸ್ಥೆ ತಿಳಿದುಕೊಳ್ಳುವ ಉದ್ದೇಶಕ್ಕಾಗಿ ಎಲ್ಲ ಜಿಲ್ಲೆ, ತಾಲೂಕು ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ನಡೆಯುತ್ತಿದೆ. ಅದರಂತೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವೈದ್ಯರೊಂದಿಗೆ ಸಭೆ ನಡೆಸಿದ್ದೇನೆ ಎಂದರು.
ಈಗಾಗಲೇ ಹುಬ್ಬಳ್ಳಿಯ ಕಿಮ್ಸ್ ಕೋವಿಡ್ ಅಲೆಗಳಲ್ಲೂ ಆರೋಗ್ಯ ಸಂಜೀವಿನಿಯಾಗಿ ಕೆಲಸ ಮಾಡಿದೆ. ಹೊಸ ಸೋಂಕು ಎದುರಿಸಲು ಕಿಮ್ಸ್ ಸರ್ವ ಸನ್ನದ್ಧವಾಗಿದೆ. ಕೋವಿಡ್‌ಗಾಗಿ ಪ್ರತ್ಯೇಕ 50-60 ಹಾಸಿಗೆ, 200 ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಕಿಮ್ಸ್ ವೈದ್ಯರು ಮೂರು ಅಲೆಗಳಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಈ ದಿಸೆಯಲ್ಲಿ ವೈದ್ಯರು ಇನ್ನಷ್ಟು ಕ್ರಿಯಾಶೀಲವಾಗಿ ಜನರಿಗೆ ಸ್ಪಂದಿಸುವ ಕೆಲಸ ಮಾಡುತ್ತಾರೆ ಎಂದು ಹೇಳಿದರು.
ಹೊಸ ವರ್ಷದ ಕಾರ್ಯಸೂಚಿಯನ್ನು ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ. ಟಫ್ ರೂಲ್ಸ್‌ಕ್ಕಿಂತ ಜನರು ಟಫ್ ಮೈಂಡ್‌ಸೆಟ್ ಮಾಡಿಕೊಳ್ಳಬೇಕು. ಎಂತಹ ಸೋಂಕು ಬಂದರೂ ಅದನ್ನು ಸಮರ್ಥವಾಗಿ ಎದುರಿಸುತ್ತೇನೆಂಬ ದೃಢ ಮನಸ್ಸು ಜನರದ್ದಾಗಬೇಕು. ಸರ್ಕಾರ ಮೂರು ಅಲೆಗಳನ್ನು ಸಮರ್ಥವಾಗಿ ಎದುರಿಸಿದೆ. ಇದನ್ನೂ ಸಮರ್ಥವಾಗಿ ನೀವು ಎದುರಿಸಿ. ನಿಮ್ಮ ರಕ್ಷಣೆಯನ್ನು ಸರ್ಕಾರ ಮಾಡಲಿದೆ. ವಿದೇಶಿ ಪ್ರಯಾಣಿಕರನ್ನು ಕೇಂದ್ರ ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಶೇ. 2 ರಷ್ಟು ಪರೀಕ್ಷೆ ಮಾಡಲಾಗುತ್ತಿದೆ. ಏನಾದರೂ ಹೆಚ್ಚು ಪ್ರಕರಣಗಳು ಕಂಡುಬಂದಲ್ಲಿ ಮತ್ತಷ್ಟು ಟೆಸ್ಟಿಂಗ್ ಮಾಡಲಾಗುವುದು ಎಂದರು.