ಹುಬ್ಬಳ್ಳಿ: ವಿದ್ಯಾರ್ಥಿಗಳ ಕಲಿಕೆ ಈಗಾಗಲೇ ನಿಂತುಹೋಗಿದೆ. ಹೀಗಾಗಿ, ಸರ್ಕಾರದ್ದು ಅತ್ಯಂತ ಜವಾಬ್ದಾರಿ ನಡೆ ಇದೆ. ಶಾಲೆಗಳಲ್ಲಿ 1 ಪ್ರತಿಶತಕ್ಕಿಂತ ಹೆಚ್ಚು ಕೊರೊನಾ ಪ್ರಕರಣಗಳು ಕಂಡು ಬಂದರೆ ಅಂತಹ ಶಾಲೆಗಳನ್ನ ಬಂದ್ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.
ನಗರದಲ್ಲಿಂದು ಕಿಮ್ಸ್ ಆಸ್ಪತ್ರೆಯಲ್ಲಿ ಮಾತನಾಡಿದ ಅವರು, ಹಲವು ಮಾರ್ಗಸೂಚಿಗಳನ್ನ ಇಟ್ಟುಕೊಂಡು ಇದೀಗ ಶಾಲೆಗಳನ್ನ ಆರಂಭಿಸಲಾಗಿದೆ. ಇಂದಿನಿಂದ 1 ರಿಂದ 5 ನೇ ತರಗತಿ ಶಾಲೆ ಆರಂಭಿಸಲಾಗಿದೆ. ಕೆಲವು ದೇಶಗಳಲ್ಲಿ ಈಗಾಗಲೇ 3 ನೇ ಅಲೆ ಕುರಿತು ಮಾತುಗಳು ಕೇಳಿ ಬರುತ್ತಿವೆ. ರಷ್ಯಾ, ಇಂಗ್ಲೆಂಡ್ನಲ್ಲಿ ಅದೇ ರೀತಿ ದೇಶದ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಕೊರೊನಾ ಹೊಸ ತಳಿ ಬಂದಿದೆ ಎಂಬ ವರದಿ ಬಂದಿದೆ. ಹೀಗಾಗಿ, ನಮ್ಮ ತಜ್ಞರ ಮತ್ತು ತಾಂತ್ರಿಕ ಸಿಬ್ಬಂದಿ ಜೊತೆ ಮಾತನಾಡಿದ್ದೇನೆ ಎಂದರು.
ಹೊಸ ತಳಿಯ ಲಕ್ಷಣಗಳ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ನಮ್ಮ ಗಮನಕ್ಕೆ ತರಲು ಸೂಚಿಸಿದ್ದೇನೆ. ಈ ಹಿನ್ನೆಲೆ ರಾಜ್ಯದಲ್ಲೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಮೊದಲ ಡೋಸ್ ವ್ಯಾಕ್ಸಿನ್ ಪಡೆದವರು 2ನೇ ಡೋಸ್ ಕಡ್ಡಾಯ ಪಡೆದುಕೊಳ್ಳಬೇಕು. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿ ಇರುತ್ತೆ. 4 ತಿಂಗಳಿನಿಂದಲೂ ಶಾಲೆಗಳು ಆರಂಭವಾಗಿದ್ದರೂ ಈವರೆಗೆ ಮಕ್ಕಳಲ್ಲಿ ಅಂತಹ ಆತಂಕ ಕಂಡುಬಂದಿಲ್ಲ. ಮಕ್ಕಳಲ್ಲಿ ಗಂಭೀರ ಸಮಸ್ಯೆಗಳು ಕಾಣಿಸಿಕೊಂಡಿಲ್ಲ ಎಂದರು.
ಆರೋಪಗಳು ಸತ್ಯಕ್ಕೆ ದೂರುವಾಗಿವೆ
ಉಪಚುನಾವಣೆ ಹಿನ್ನೆಲೆಯಲ್ಲಿ ವಿಧಾನಸೌಧ ಖಾಲಿ ಖಾಲಿಯಾಗಿದೆ ಎಂಬ ಆರೋಪಗಳು ಸತ್ಯಕ್ಕೆ ದೂರವಾದದ್ದು. ರಾಜ್ಯದಲ್ಲಿ ಎಲ್ಲ ಯೋಜನೆಯ ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿವೆ. ನಾನು ಎಲ್ಲೇ ಇದ್ದರೂ ಸಭೆಗಳನ್ನ ಮಾಡುತ್ತಿದ್ದೇನೆ. ಕಳೆದ ಎಂಟು ದಿನಗಳಿಂದ ಈ ಭಾಗದಲ್ಲಿದ್ದೇವೆ. ಇಲ್ಲಿ ಬಂದರೂ ಸಹ ಹಲವು ಜಿಲ್ಲೆಗಳಲ್ಲಿ ಆರೋಗ್ಯ ವಿಚಾರವಾಗಿ ಪರಿಶೀಲನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.