ಧಾರವಾಡ :ಅಲ್ಪಸಂಖ್ಯಾತರನ್ನು ಮುಖ್ಯ ವಾಹಿನಿಗೆ ತರಲು ವೃತ್ತಿ ಶಿಕ್ಷಣ ನೀಡಲು ಚಿಂತನೆ ನಡೆದಿದೆ. ರಾಜ್ಯದ ಪ್ರತಿ ಕಂದಾಯ ವಿಭಾಗದಲ್ಲಿ ಒಂದರಂತೆ 4 ಪಾಲಿಟೆಕ್ನಿಕ್‍ಗಳನ್ನು ಈ ಉದ್ದೇಶಕ್ಕಾಗಿ ಪ್ರಾರಂಭಿಸಲಾಗುವುದು ಎಂದು ಕೈಮಗ್ಗ, ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಬಾಳಾಸಾಹೇಬ್ ಪಾಟೀಲ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಇಲಾಖೆಯ ಪ್ರಗತಿಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರನ್ನು ಶಿಕ್ಷಣದ ಮೂಲಕವೇ ಸಮಾಜದ ಮುಖ್ಯ ವಾಹಿನಿಗೆ ತರಬೇಕು. ಈ ನಿಟ್ಟಿನಲ್ಲಿ ಮದರಸಾಗಳ ಶಿಕ್ಷಣ ಪದ್ಧತಿಯೊಂದಿಗೆ ಇತರ ನಿಗದಿತ ಪಠ್ಯ ಕ್ರಮಗಳನ್ನು ವಯಸ್ಸಿಗನುಗುಣವಾಗಿ ಬೋಧಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಇಲಾಖೆಯು ಅಗತ್ಯ ಕಾರ್ಯಕ್ರಮ ರೂಪಿಸಬೇಕು ಎಂದರು.