ಧಾರವಾಡ :ಸರ್ಕಾರಿ ಕಚೇರಿಗೆ ಬರುವವರನ್ನು ಗದರಿಸಬೇಡಿ ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಧಾರವಾಡದ ಜಿಪಂ ಸಭಾಂಗಣದಲ್ಲಿ ನಡೆದ ಮೊದಲನೇ ತ್ರೈಮಾಸಿಕ ಕೆಡಿಪಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಅವರು ಎಚ್ಚರಿಕೆ ನೀಡಿ, ಫುಲ್ ಕ್ಲಾಸ್ ತೆಗೆದುಕೊಂಡರು. ಕಚೇರಿಗೆ ಬರುವವರಿಗೆ ಹೊರಗೆ ಹೋಗು ಅಂತಾ ಯಾಕೆ ಹೇಳ್ತೀರಿ?.
ರೈತರು, ಜನಸಾಮಾನ್ಯರು ಬಂದಾಗ ಗದರಿಸಬೇಡಿ. ನಿಮ್ಮದು ನೀತಿ ನಿಯಮಗಳ ಪ್ರಕಾರ ಕೆಲಸ ಮಾಡುವುದು ಆಗಬೇಕು. ಆದರೆ, ಕಚೇರಿಗೆ ಬಂದವರಿಗೆ ಹೊರಗೆ ಹೋಗಿ ಎಂದರೆ ಹೇಗೆ? ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.
ಎಲ್ಲರಿಗೂ ಓದು-ಬರಹ ಬರುವುದಿಲ್ಲ. ರೈತರಿಗೆ ಎಲ್ಲ ನೀತಿ-ನಿಯಮ ಗೊತ್ತಿರುವುದಿಲ್ಲ. ಅವರಿಗೆ ತಿಳಿ ಹೇಳಿ ಸ್ಪಂದಿಸಬೇಕು. ಇದು ಜಿಲ್ಲೆಯ ಎಲ್ಲ ಅಧಿಕಾರಿಗಳಿಗೂ ಅನ್ವಯ. ಯಾರೋ ಒಬ್ಬ ಅಧಿಕಾರಿಯಿಂದ ಎಲ್ಲರಿಗೂ ಕೆಟ್ಟ ಹೆಸರು ಬರುವುದು ಬೇಡ. ಕಚೇರಿಗೆ ಬಂದವರಿಗೆ ಸ್ಪಂದಿಸುವ ಕೆಲಸ ಮಾಡಿ ಎಂದು ಕ್ಲಾಸ್ ತೆಗೆದುಕೊಂಡರು. ಸಭೆಗೆ ಬಾರದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಅವರು ಸೂಚಿಸಿದರು.