ಧಾರವಾಡ : "ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಇದಕ್ಕೆ ನಮ್ಮ ಐದು ಕಾರ್ಯಕ್ರಮಗಳೇ ಸಾಕ್ಷಿ. ಮುಂದಿನ ದಿನಗಳಲ್ಲಿ ಯುವನಿಧಿ ಹಾಗೂ ಗೃಹಲಕ್ಷ್ಮಿ ಯೋಜನೆಗಳು ಆರಂಭವಾಗಲಿದೆ" ಎಂದು ಸಚಿವ ಸಂತೋಷ ಲಾಡ್ ಹೇಳಿದರು. ಜಿಲ್ಲೆಯಲ್ಲಿಂದು ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, "ಬಿಜೆಪಿ ನಮ್ಮ ಮೇಲೆ ಆರೋಪ ಮಾಡುತ್ತಾ ಬಂದಿದೆ. ಆದರೆ ನಮ್ಮ ಕಾಂಗ್ರೆಸ್ ಸರ್ಕಾರ ಇಂದು ಸುಮಾರು 60 ಸಾವಿರ ಕೋಟಿ ರೂಪಾಯಿಗಳನ್ನು ವಿವಿಧ ಯೋಜನೆ ಮೂಲಕ ಬಡವರಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ" ಎಂದು ಹೇಳಿದರು.
"ಅನ್ನಭಾಗ್ಯ ಯೋಜನೆಯಲ್ಲಿ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದೆವು. ಸದ್ಯ ಐದು ಕೆಜಿ ಅಕ್ಕಿ ಕೊಡಲಾಗುತ್ತಿದೆ. ಇದರಲ್ಲೂ ಬಿಜೆಪಿಯವರು ರಾಜಕೀಯ ಮಾಡಿದರು. ಇದು ರಾಜ್ಯ ಸರ್ಕಾರದ ಅಕ್ಕಿ ಅಲ್ಲ ನರೇಂದ್ರ ಮೋದಿ ಅವರ ಅಕ್ಕಿ ಎಂದು ಹೇಳಿದರು. ಕೇಂದ್ರ ಸರ್ಕಾರ ಕೊಡುತ್ತಿರುವ ಅಕ್ಕಿ ಅದು ನರೇಂದ್ರ ಮೋದಿ ಅವರ ಅಕ್ಕಿಯಲ್ಲ. ಇದು ಯುಪಿಎ ಸರ್ಕಾರದ ಅವಧಿಯಲ್ಲಿ ಯಾರೂ ಹಸುವಿನಿಂದ ಬಳಲಬಾರದು ಎಂದು ಆಹಾರ ಭದ್ರತೆ ಕಾನೂನು ತಂದು ದೇಶದ ಎಲ್ಲಾ ರಾಜ್ಯಗಳಿಗೆ ಅಕ್ಕಿಯನ್ನು ವಿತರಿಸುತ್ತಿದೆ. ಇದು ನರೇಂದ್ರ ಮೋದಿ ಸರ್ಕಾರದ ಕಾರ್ಯಕ್ರಮ ಅಲ್ಲ. ಇದು ಯುಪಿಎ ಸರ್ಕಾರದ ಕೊಡುಗೆ" ಎಂದರು.
"ಆಹಾರ ಭದ್ರತೆ ಕಾಯಿದೆ ತಂದಿದ್ದು ಕಾಂಗ್ರೆಸ್ ಸರ್ಕಾರ. 2013ರಿಂದ 18ರವರೆಗೆ ಇದ್ದ ಕಾಂಗ್ರೆಸ್ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಬಡ್ಡಿರಹಿತ ಸಾಲ ಆರಂಭಿಸಿದ್ದು ಸಿದ್ದರಾಮಯ್ಯನವರು. ಈ ಸಲ ಐದು ಲಕ್ಷದವರೆಗೆ ಬಡ್ಡಿ ರಹಿತ ಸಾಲ ಕೊಡಲಿದ್ದೇವೆ. ಸರ್ಕಾರಿ ಶಾಲೆಗಳಿಗೆ ಹಾಲು, ಬಿಸಿಯೂಟ ಸೇರಿ ಎಲ್ಲ ಕಾರ್ಯಕ್ರಮ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ" ಎಂದು ತಿಳಿಸಿದರು.
ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ :ಹತ್ತು ವರ್ಷದ ಮೋದಿ ಆಡಳಿತದಲ್ಲಿ ರೈತರಿಗೆ ಏನು ಅನುಕೂಲ ಆಗಿದೆ ಎಂದು ಪ್ರಶ್ನಿಸಿದರು. "ಉದ್ದಿಮೆದಾರರ 25 ಲಕ್ಷ ಕೋಟಿ ಸಾಲ ಮನ್ನಾ ಆಗಿದೆ. ನೋಟು ಅಮಾನ್ಯೀಕರಣ ಮಾಡಿದ್ದರು. ಅದರಿಂದ ಸಾಕಷ್ಟು ಹಣ ಬ್ಯಾಂಕ್‌ಗೆ ಹೋಗಿತ್ತು. ಆದರೆ ಆ ಹಣದಿಂದ ರೈತರಿಗೆ ಯಾವ ಲಾಭವೂ ಆಗಿಲ್ಲ. ಎಲ್ಲ ಹಣ ಉದ್ದಿಮೆದಾರರಿಗೆ ಹೋಗಿದೆ. 9 ವರ್ಷದಲ್ಲಿ ಸಣ್ಣ ಉದ್ಯಮಗಳಿಗೆ ಸಬ್ಸಿಡಿ ಕೊಟ್ಟಿಲ್ಲ, ಸಾಲ ಮನ್ನಾ ಆಗಿಲ್ಲ. ಆದ್ರೆ ದೊಡ್ಡ ಉದ್ಯಮಿಗಳ ಸಾಲ ಮಾತ್ರ ಮನ್ನಾ ಆಗಿದೆ" ಎಂದು ಟೀಕಿಸಿದರು.