ಧಾರವಾಡ: ನಮಗೆ ಜನರು ಐದು ವರ್ಷಗಳ ಕಾಲ ಆಡಳಿತ ಮಾಡಲು ಆಶೀರ್ವಾದ ಮಾಡಿದ್ದಾರೆ. ಹೀಗಾಗಿ, ನಮ್ಮ ಸರ್ಕಾರ 5 ವರ್ಷ ನಡೆಯುತ್ತದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು. ಧಾರವಾಡದಲ್ಲಿಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಬಿಜೆಪಿಯವರು ಕೇವಲ 65 ಸ್ಥಾನಗಳನ್ನು ಪಡೆದು ಹತಾಶರಾಗಿದ್ದಾರೆ. 8 ತಿಂಗಳಲ್ಲಿ ಲೋಕಸಭೆ ಚುನಾವಣೆ ಬರುತ್ತಿದೆ. ಹೀಗಾಗಿ ಅವರು ಗಿಮಿಕ್ ಮಾಡಲು ಮುಂದಾಗುತ್ತಿದ್ದಾರೆ. ಯೋಜನೆಗಳ ಮೂಲಕ ಕೇಂದ್ರ ಸರ್ಕಾರ ಮಾತನಾಡುತ್ತಿಲ್ಲ. ಬಿಜೆಪಿ ವಿವಾದಗಳನ್ನು ಹುಟ್ಟು ಹಾಕಿ ನಮ್ಮ ಸರ್ಕಾರದ ಅಭಿಪ್ರಾಯ ಕೆಡಿಸುವ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ" ಎಂದರು.
ಐಎಎಸ್ ಅಧಿಕಾರಿಗಳ ಬೆಂಗಳೂರು ವರ್ಗಕ್ಕೆ ಲಂಚ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, "ಕಳೆದ ಒಂದು ತಿಂಗಳಿನಿಂದ ವರ್ಗಾವಣೆಯಲ್ಲಿ ದುಡ್ಡು ದುಡ್ಡು ಅಂತ ಹೇಳುತ್ತಿದ್ದಾರೆ. ಈ ರೀತಿ ಮಾತನಾಡುವುದರಿಂದ ಸಾರ್ವಜನಿಕರಿಗೆ ಏನು ಉಪಯೋಗ? ಉಪಯೋಗವಿದ್ದರೆ ಮಾತನಾಡೋಣ. ನಮ್ಮ ಐದು ಗ್ಯಾರಂಟಿಗಳು ಯಶಸ್ವಿಯಾಗಿವೆ. ಇದರಿಂದಾಗಿ ಅವರಿಗೆ ನೋವಾಗಿದೆ. ಹೀಗಾಗಿ ಸರ್ಕಾರದ ಹೆಸರು ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ" ಎಂದು ಹೇಳಿದರು.
ಮುನಿರತ್ನ ಪುನಃ ಕಾಂಗ್ರೆಸ್ ಸೇರ್ಪಡೆ ಸುದ್ದಿ ವಿಚಾರವಾಗಿ ಮಾತನಾಡಿ, "ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ನಾವು ಯಾರನ್ನೂ ಸೆಳೆಯುತ್ತಿಲ್ಲ. ಪಕ್ಷದ ಸಿದ್ಧಾಂತ ಒಪ್ಪಿ ಬರುವವರನ್ನು ಸ್ವಾಗತಿಸುತ್ತೇವೆ. ನಮ್ಮದು ಡಬಲ್ ಡೆಕ್ಕರ್ ಬಸ್ ಇದ್ದಂತೆ. ಎಲ್ಲಿ ಬೇಕಾದರೂ ಹತ್ತಬಹುದು, ಎಲ್ಲಿ ಬೇಕಾದರೂ ಇಳಿಯಬಹುದು" ಎಂದು ತಿಳಿಸಿದರು.
"ಮುನೇನಕೊಪ್ಪ ಕಾಂಗ್ರೆಸ್ ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಎಂಬ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರು ಬಂದರೆ ಸೇರಿಸಿಕೊಳ್ಳುತ್ತೇವೆ. ಯಾರಿಗೆ ಎಂಪಿ ಟಿಕೆಟ್ ಕೊಡಬೇಕು ಎನ್ನುವುದನ್ನು ಹೈಕಮಾಂಡ್ ಫೈನಲ್ ಮಾಡುತ್ತದೆ. ಮಾಜಿ ಶಾಸಕ ಚಿಕ್ಕನಗೌಡರ ಕಾಂಗ್ರೆಸ್ ಸೇರ್ಪಡೆ ವಿಚಾರ ಸೇರುತ್ತಾರೆ ಎಂಬ ಸುದ್ದಿ ನನಗೂ ಬಂದಿದೆ. ಆದರೆ ಅವರು ಏನೇನು ಷರತ್ತು ಹಾಕಿದ್ದಾರೆ ಎಂಬ ಮಾಹಿತಿ ಇಲ್ಲ" ಎಂದು ಸ್ಪಷ್ಟಪಡಿಸಿದರು.
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ: "ನಮ್ಮ ಸರ್ಕಾರದ ಕಾರ್ಯಕ್ರಮಗಳು ಮನೆ ಮನೆಗಳಿಗೆ ಮುಟ್ಟುತ್ತಿವೆ. ಅದರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಹತ್ತು ವರ್ಷದಿಂದ ಮೋದಿಯವರ ಮಾತುಗಳನ್ನು ಜನ ಕೇಳಿಬಿಟ್ಟಿದ್ದಾರೆ. ಕೇಂದ್ರ ಎಲ್ಲ ರೀತಿಯಲ್ಲೂ ವಿಫಲವಾಗಿದೆ. ಮಾಧ್ಯಮಗಳ ಮೂಲಕ ಕೇವಲ ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ. 2014ರವರೆಗೆ ಎಲ್ಲ ಪಕ್ಷದವರು ಆಡಳಿತ ಮಾಡಿದ್ದರು. ಅಲ್ಲಿವರೆಗೆ ದೇಶದ ಸಾಲ 55 ಲಕ್ಷ ರೂ ಕೋಟಿ ಇತ್ತು. ಈಗ ಅದು 175 ಲಕ್ಷ ಕೋಟಿ ರೂ.ಗೆ ಮುಟ್ಟಿದೆ. ಇದಕ್ಕೆ ಉತ್ತರ ಕೊಡುವುದಿಲ್ಲ, ಸಂಸತ್‌ಗೂ ಬರುವುದಿಲ್ಲ. ಇದು ಕೇವಲ ತೋರಿಕೆಯ ಸರ್ಕಾರ ಆಗಿದೆ" ಎಂದು ಟೀಕಿಸಿದರು.
"ನಾನು ಧಾರವಾಡ ಲೋಕಸಭೆ ಕ್ಷೇತ್ರಕ್ಕೆ ಆಕಾಂಕ್ಷಿಯಲ್ಲ. ಲೋಕಸಭೆ ಚುನಾವಣೆಯಲ್ಲಿ ನನಗೆ ಆಸಕ್ತಿ ಇಲ್ಲ. ಆದರೆ ಹೈಕಮಾಂಡ್ ಹೇಳಿದರೆ ಸ್ಪರ್ಧೆ ಮಾಡಬೇಕಾಗುತ್ತದೆ. ನನಗೆ ಸ್ಪರ್ಧಿಸಲು ಆಸಕ್ತಿ ಇಲ್ಲ. ಲೋಕಸಭೆಗೆ ಗೆಲ್ಲಿಸುವ ಒತ್ತಡ ಇದೆ. ನಮ್ಮೆಲ್ಲರಿಗೂ ಒತ್ತಡ ಇದೆ. ಕಾರ್ಯಕರ್ತರ ಮೇಲೂ ಗೆಲ್ಲಿಸುವ ಒತ್ತಡವಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ" ಎಂದರು.
ಇದನ್ನೂ ಓದಿ:ನನ್ನ ಬಗ್ಗೆ ಕಾಂಗ್ರೆಸ್ ಚಿಂತಿಸುವುದು ಬೇಡ, ಇಂಥ ಪ್ರಾಮಾಣಿಕ ಸರ್ಕಾರ ಹಿಂದೆಯೂ ನೋಡಿಲ್ಲ, ಮುಂದೆಯೂ ನೋಡಲ್ಲ: ಕುಮಾರಸ್ವಾಮಿ ಕಿಡಿ