ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಧಾರವಾಡ :ಮಾಜಿ ಸಿಎಂ ಯಡಿಯೂರಪ್ಪ ಅವರ ನಿವಾಸದ ಮೇಲೆ ಕಲ್ಲು ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ. ಬಿಎಸ್ವೈ ಮನೆ ಮೇಲೆ ಕಲ್ಲು ತೂರಾಟ ವಿಚಾರದ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ, ಸದಾಶಿವ ಆಯೋಗದ ವರದಿ ಯಾರು ವಿರೋಧ ಮಾಡುತ್ತಾರೋ ಅವರಿಗೆ ಸಿಎಂ ನಿನ್ನೆ ಹೇಳಿದ್ದಾರೆ. ವೈಯಕ್ತಿಕವಾಗಿಯೂ ಹೇಳಿದ್ದಾರೆ. ಸಾರ್ವಜನಿಕವಾಗಿಯೂ ಹೇಳಿದ್ದಾರೆ. ಎಲ್ಲರಿಗೂ ಒಪ್ಪುವಂತಹ ರೀತಿಯಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಬಂಧಿಸಿದವರನ್ನು ಕರೆದು ಮಾತನಾಡಿ ಎಲ್ಲರಿಗೂ ಅನುಕೂಲವಾಗುವಂತೆ ಮನವರಿಕೆ ಮಾಡುತ್ತಾರೆ. ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು ಎಂದು ನಾನು ಮನವಿ ಮಾಡುತ್ತೇನೆ ಎಂದು ವಿನಂತಿಸಿಕೊಂಡರು.
ಗಲಾಟೆ ರಾಜಕೀಯ ಪ್ರೇರಿತ ಕೂಡಾ ಆಗಿರಬಹುದು-ಪ್ರಹ್ಲಾದ್ ಜೋಶಿ: ಯಡಿಯೂರಪ್ಪನವರು ರಾಜ್ಯ ಕಂಡ ಅತ್ಯಂತ ಮುತ್ಸದ್ದಿ ಹಿರಿಯ ರಾಜಕಾರಣಿ. ಅವರ ಮನೆ ಮೇಲೆ ಈ ರೀತಿ ಮಾಡುವುದು ಸರಿಯಲ್ಲ. ಅದು ಒಪ್ಪುವಂತದ್ದಲ್ಲ, ಎಲ್ಲರನ್ನೂ ಕರೆದು ಸದಾಶಿವ ಆಯೋಗದ ಬಗ್ಗೆ ಮಾತನಾಡಿದ್ದಾರೆ. ಅಧಿಕಾರಿಗಳು, ಪ್ರಮುಖರ ಜೊತೆ ಮಾತನಾಡಿದ್ದಾರೆ. ಇದನ್ನೆಲ್ಲ ಮಾಡದೇ ವರದಿ ಜಾರಿಗೆ ತರಲು ಸಾಧ್ಯವಿಲ್ಲ. ಗಲಾಟೆ ರಾಜಕೀಯ ಪ್ರೇರಿತ ಕೂಡ ಆಗಿರಬಹುದು. ಅದರ ಬಗ್ಗೆ ನಾನೂ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದರು.
ಹೆಚ್ಡಿಕೆಗೆ ಹಾಲಪ್ಪ ಆಚಾರ್ ತಿರುಗೇಟು : ಮೀಸಲಾತಿ ಮಕ್ಕಳಾಟ ಆಗಿದೆ ಎಂದು ಹೆಚ್‌ಡಿಕೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಹಾಲಪ್ಪ ಆಚಾರ್ ಹೆಚ್ ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದಾಶಿವ ಆಯೋಗದ ವರದಿ ಆಗಿ 25 ವರ್ಷ ಆಗಿತ್ತು. ವರದಿ ತಗೊಂಡು ಧೂಳಿಗೆ ಇಟ್ಟಿದ್ದರು. ಮಾಡಬಾರದು ಅಂತಾ ಯಾರಾದರೂ ಹೇಳಿದ್ದಾರಾ ? ವರದಿ ಯಾಕಾದ್ರೂ ತಗೊಂಡಿದ್ದರು. ಆದರೆ ನಮ್ಮ ಸಿಎಂ ಬಹಳ ಧೈರ್ಯದಿಂದ ಅನುಷ್ಠಾನಕ್ಕೆ ಹೊರಟಿದ್ದಾರೆ ಎಂದರು.
ಯಾರ ಹಕ್ಕನ್ನೂ ನಾವು ಕಿತ್ತುಕೊಂಡಿಲ್ಲ : ಮೀಸಲಾತಿಗೆ ಹೋರಾಟ ಮಾಡಿದವರೆಲ್ಲ ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಇವರೆಲ್ಲ ಹೀಗೆ ಮಾತನಾಡುತ್ತಿದ್ದಾರೆ. ತಾವೂ ಮಾಡಲಿಲ್ಲ ಉಳಿದವರು ಮಾಡಬಾರದಾ? ಅನವಶ್ಯಕ ಕಾಲು ಎಳೆಯುವುದೇ ಅವರ ಪ್ರವೃತ್ತಿ. ಯಾರ ಮೀಸಲಾತಿಯನ್ನೂ ಕಸಿದುಕೊಂಡಿಲ್ಲ. ಸಂವಿಧಾನಾತ್ಮಕವಾಗಿ ಯಾರ ಮೀಸಲಾತಿ ಕಸಿದುಕೊಳ್ಳಲು ಆಗುವುದಿಲ್ಲ. ಯಾರ ಹಕ್ಕನ್ನೂ ನಾವು ಕಿತ್ತುಕೊಂಡಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಮ್ಮಲ್ಲಿ ಅವರ ರೀತಿ ಗೊಂದಲ ಇಲ್ಲ. ಅವರಲ್ಲಿ ನಾಯಕರೇ ಕ್ಷೇತ್ರಕ್ಕಾಗಿ ಬಡಿದಾಡ್ತಾರೆ. ಸಿದ್ದರಾಮಯ್ಯ ಒಮ್ಮೆ ಬಾದಾಮಿ ಅಂತಾರೆ, ಮೈಸೂರಿನಲ್ಲಿ ಕೊಪ್ಪಳ ಅಂತಾರೆ. ನಮ್ಮಲ್ಲಿ ಅಂತ ಪರಿಸ್ಥಿತಿ ಇಲ್ಲ. ಟಿಕೆಟ್ ಹಂಚಿಕೆಯಲ್ಲಿ ಗುಜರಾತ್ ಮಾದರಿಯಲ್ಲಿ ಹಂಚಿಕೆ ಪ್ರಶ್ನೆ ಯಾವ ಮಾಡೆಲ್ ಕೂಡಾ ಇರಲ್ಲ. ಬಿಜೆಪಿಯದೇ ಒಂದು ಮಾಡೆಲ್ ಇದೆ ಎಂದರು.
ಧಾರವಾಡಕ್ಕೆ ಉಸ್ತುವಾರಿಯಾಗಿ ಬರುತ್ತೇನೆ : ಯಾರು ತಮ್ಮನ್ನ ತಾನು ತೊಡಗಿಸಿಕೊಂಡು ಕೆಲಸ ಮಾಡಿದ್ದಾರೆ ಅವರಿಗೆ ಪ್ರಾತಿನಿಧ್ಯ ಕೊಟ್ಟು ಟಿಕೆಟ್ ಕೊಡಬೇಕು ಎಂದು ರೂಢಿ ಇದೆ. ಬಿಜೆಪಿಯಲ್ಲಿ ಟಿಕೆಟ್ಗಾಗಿ ಅಭ್ಯರ್ಥಿಗಳ ಪೈಪೋಟಿ ವಿಚಾರ ಸಹಜವಾಗಿ ಎಲ್ಲರಿಗೆ ಸಮಾಜದಲ್ಲಿ ಸೇವೆ ಮಾಡಬೇಕು ಎಂದು ಆಸೆ ಇರುತ್ತೆ. ಅದಕ್ಕೆ ಟಿಕೆಟ್ ಕೇಳುವುದು ತಪ್ಪಲ್ಲ. ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಎಲ್ಲವನ್ನ ತೂಗಿ ನೋಡಿ ಯಾರಿಗೆ ಟಿಕೆಟ್ ಕೊಡಬೇಕು ಕೊಟ್ಟೇ ಕೊಡ್ತಾರೆ. ಮುಂದಿನ ಬಾರಿ ಮತ್ತೆ ಬಿಜೆಪಿ ಬಂದ ಮೇಲೆ ನಾನು ಧಾರವಾಡಕ್ಕೆ ಉಸ್ತುವಾರಿಯಾಗಿ ಬರುತ್ತೇನೆ ಎಂದು ಸಚಿವ ಹಾಲಪ್ಪ ಹೇಳಿದರು.
ಇದನ್ನೂ ಓದಿ :ತಪ್ಪು ಗ್ರಹಿಕೆಯಿಂದ ನಮ್ಮ ಮನೆ ಮೇಲೆ ಕಲ್ಲು ತೂರಾಟ, ಯಾರ ಮೇಲೂ ಕ್ರಮ ಬೇಡ: ಬಿಎಸ್ವೈ