ಹುಬ್ಬಳ್ಳಿ: ನವೆಂಬರ್ 2 ರಿಂದ 4 ರವರೆಗೆ ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.
ನಗರದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯ ಕೈಗಾರಿಕೆ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದೆ. ಅಲ್ಲದೇ ಅತಿ ಹೆಚ್ಚು ಬಂಡವಾಳ ಹೂಡಿಕೆಯಲ್ಲಿಯೂ ಮೊದಲ ಸ್ಥಾನದಲ್ಲಿದೆ. ಈ ದೃಷ್ಟಿಯಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ದೇಶ, ವಿದೇಶಗಳಿಂದ ಹೊಸ ಹೊಸ ಉದ್ಯಮಿದಾರರು ಭಾಗಿಯಾಗುವ ನಿರೀಕ್ಷೆ ಇದೆ. ಕನಿಷ್ಠ ಐದು ಲಕ್ಷ ಕೋಟಿ ರೂ ಹೂಡಿಕೆ ಗುರಿ ಹೊಂದಿದೆ. ಇದರ ಜೊತೆಗೆ 5 ಲಕ್ಷ ಜನರಿಗೆ ಉದ್ಯೋಗಾವಕಾಶ ಒದಗಿಸುವ ಉದ್ದೇಶ ಹೊಂದಿದ್ದೇವೆ ಎಂದರು.
ಕೈಗಾರಿಕೆ ಸ್ಥಾಪನೆಗೆ ರೈತರ ಭೂಮಿ ವಶ: ಈಗಾಗಲೇ ಬಿಯಾಂಡ್ ಬೆಂಗಳೂರು ಅಡಿಯಲ್ಲಿ ತುಮಕೂರು, ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಕೃಷಿಗೆ ಯೋಗ್ಯವಲ್ಲದ ಭೂಮಿಯನ್ನು ಕೈಗಾರಿಕೆ ಸ್ಥಾಪನೆಗೆ ರೈತರ ಭೂಮಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಮೂಲಕ ಹೊಸ ಹೂಡಿಕೆದಾರರನ್ನು ಪ್ರೋತ್ಸಾಹಿಸುವ ಜೊತೆಗೆ ಅವರಿಗೆ ಮೂಲ ಸವಲತ್ತುಗಳನ್ನು ಒದಗಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ.