ಧಾರವಾಡ :ಗೃಹಲಕ್ಷ್ಮಿ ಯೋಜನೆ ಗೊಂದಲ ವಿಚಾರ ಈಗ ಎಲ್ಲವೂ ಸರಳ ಮಾಡಿದ್ದೇವೆ. ಈಗಾಗಲೇ 1.9 ಕೋಟಿ ಜನರಿಗೆ ತಲುಪಿದ್ದೇವೆ. ಇನ್ನಾದರೂ ಐದಾರು ಲಕ್ಷ ಜನರದ್ದು ಕ್ಲಿಯರ್ ಆಗಬೇಕಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ಅನುದಾನದ ಕೊರತೆ ಇಲ್ಲ. ಆದರೆ ತಾಂತ್ರಿಕ ತೊಂದರೆ ಕಾರಣಕ್ಕೆ ವಿಳಂಬ ಆಗಿದೆ. 15 ಲಕ್ಷ ಜನ ಆಧಾರ್ ಲಿಂಕ್ ಇಲ್ಲದ ಬ್ಯಾಂಕ್ ಖಾತೆ ನೀಡಿದ್ದರು. ಹೀಗಾಗಿ ಅಂಥವರಿಗೆ ವಿಳಂಬ ಆಗಿದೆ. ಕೆಲವರ ಅಕೌಂಟ್ ಚಾಲ್ತಿ ಇರಲಿಲ್ಲ. ಅದರಿಂದಲೂ ತಡವಾಗಿದೆ. ಆದರೆ ಈಗ ಎಲ್ಲ ಕ್ಲಿಯರ್ ಆಗುತ್ತಿದೆ. ಯಾವುದೇ ಯೋಜನೆಗೆ ಅನುದಾನದ ಕೊರತೆ ಇಲ್ಲ. ಅದಕ್ಕಾಗಿ ಸಿಎಂ ಹಣ ತೆಗೆದಿಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಅಭಿವೃದ್ಧಿ ಕೆಲಸಗಳನ್ನು ನಾವು ನಿಲ್ಲಿಸಿಲ್ಲ. ಆದರೆ ಹಿಂದಿನ ಸರ್ಕಾರ ಯದ್ವಾತದ್ವಾ ಟೆಂಡರ್ ಮಾಡಿತ್ತು. ಆದರೆ, ಅವರೇ ಈಗ ಅಭಿವೃದ್ಧಿ ಬಗ್ಗೆ ಕೇಳುತ್ತಿದ್ದಾರೆ. ಅವರು ಮಾಡಿಟ್ಟ ರಾಡಿಯನ್ನು ನಾವು ತೊಳಿತಾ ಇದ್ದೇವೆ. ಇದು ಒಂದು ಹಂತಕ್ಕೆ ಬರುತ್ತದೆ. ಇದು ಜನಸಾಮಾನ್ಯರಿಗೆ ಗೊತ್ತಾಗಬೇಕು ಎಂದು ಹೇಳಿದರು. ಲೋಕಸಭೆ ಚುನಾವಣೆಗೆ ಕೈ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು, ಮುಂದಿನ ವಾರ ಧಾರವಾಡ ಕ್ಷೇತ್ರದ ಆಕಾಂಕ್ಷಿ ಜೊತೆ ಸಭೆ ಮಾಡುವುದಾಗಿ ಹೇಳಿದರು.