ಧಾರವಾಡ/ಹುಬ್ಬಳ್ಳಿ:ರಾಜ್ಯದಲ್ಲಿ 16 ಜಿಲ್ಲೆಗಳನ್ನು ಅನ್ಲಾಕ್ ಮಾಡಿ ಸರ್ಕಾರ ಆದೇಶ ನೀಡಿದೆ. ಆದರೆ ಶೇ. 4.01 ರಷ್ಟು ಪಾಸಿಟಿವಿಟಿ ದರ ಇದ್ದರೂ ಧಾರವಾಡ ಜಿಲ್ಲೆಯನ್ನು ಅನ್ಲಾಕ್ ಮಾಡಿಲ್ಲ. ಹೀಗಾಗಿ ಜಿಲ್ಲೆಯನ್ನು ಅನ್ಲಾಕ್ ಮಾಡಿ ಎಂದು ವರ್ತಕರ ಸಂಘದವರು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದರು.
ಪಾಸಿಟಿವಿಟಿ ದರ ಕಡಿಮೆಯಿದ್ದರೂ ಅನ್ಲಾಕ್ ಯಾಕಿಲ್ಲ? ಸಾರ್ವಜನಿಕರ ಪ್ರಶ್ನೆ ವರ್ತಕರ ಬೇಡಿಕೆಗೆ ಸ್ಪಂದಿಸಿದ ಸಚಿವ ಜಗದೀಶ್ ಶೆಟ್ಟರ್ ಸಿಎಂ ಜೊತೆ ಮಾತನಾಡುವುದಾಗಿ ಭರವಸೆ ನೀಡಿದರು. ಸಿಎಂಗೆ ಕರೆ ಮಾಡಿ ವಾಸ್ತವ ಸ್ಥಿತಿಯನ್ನ ಹೇಳುತ್ತೇನೆ. ಈಗಾಗಲೇ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಜತೆ ಚರ್ಚೆ ಮಾಡಿದ್ದೇನೆ. ಮಧ್ಯಾಹ್ನದ ನಂತರ ಡಿಸಿ ಮತ್ತು ಆರೋಗ್ಯಾಧಿಕಾರಿಗಳ ಜತೆ ಚರ್ಚೆ ಮಾಡುತ್ತೇನೆ. ಸರ್ಕಾರ 10 ದಿನಗಳ ಪಾಸಿಟಿವಿಟಿ ರೇಟಿಂಗ್ ತೆಗೆದುಕೊಂಡಿದ್ದೆ ಅನ್ಲಾಕ್ ಆಗದಿರಲು ಕಾರಣ. ಆದಷ್ಟು ಬೇಗ ಅನ್ಲಾಕ್ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.
ಪಾಸಿಟಿವಿಟಿ ದರ ಶೇ. 4.1 ಇದ್ರೂ ಸಹ ಅನ್ಲಾಕ್ ಯಾಕಿಲ್ಲ?:
ಜಿಲ್ಲೆಯಲ್ಲಿ ಕಳೆದ 7 ದಿನಗಳ ಕೊರೊನಾ ಸರಾಸರಿ ಪಾಸಿಟಿವಿಟಿ ದರ ಶೇ. 4.1 ಇದೆ. ಆದರೂ ಸಹ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯದಿಂದ ಸಿಎಂ ಅವರಿಗೆ ಸರಿಯಾದ ಮಾಹಿತಿ ನೀಡದೇ ಇರುವುದರಿಂದ ಅನ್ಲಾಕ್ ಆಗಿಲ್ಲ. ಆದ್ದರಿಂದ ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮಾಹಿತಿ ನೀಡಿ ಅನ್ಲಾಕ್ ಬಗ್ಗೆ ವಿಚಾರ ಮಾಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ನಡೆಯುವ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಈ ಕುರಿತು ಚರ್ಚಿಸಿ, ಸರ್ಕಾರಕ್ಕೆ ಮತ್ತೊಮ್ಮೆ ಜಿಲ್ಲೆಯ ಪಾಸಿಟಿವಿಟಿ ದರದ ಮಾಹಿತಿ ನೀಡಲಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಪಾಸಿಟಿವಿಟಿ ದರದ ಬಗ್ಗೆ ಸರಿಯಾದ ಮಾಹಿತಿ ನೀಡಿದ್ದರೆ ಈಗಾಗಲೇ ಧಾರವಾಡ ಜಿಲ್ಲೆಯನ್ನ ಅನ್ಲಾಕ್ ಮಾಡುತ್ತಿದ್ದರು.
ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಸಮಸ್ಯೆ ಉದ್ದವಾಗಿದ್ದು, ಅದೆಷ್ಟೋ ವ್ಯಾಪಾರ ವಹಿವಾಟು ನಡೆಸುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನ್ಲಾಕ್ ಮಾಡುತ್ತಾರೆ ಎಂಬ ಆಲೋಚನೆಯಲ್ಲಿದ್ದ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಆದ್ದರಿಂದ ಸರ್ಕಾರಕ್ಕೆ ಸರಿಯಾದ ಮಾಹಿತಿ ನೀಡಿ ಜಿಲ್ಲೆಯನ್ನು ಅನ್ಲಾಕ್ ಮಾಡಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಪಾಸಿಟಿವಿಟಿ ದರ ಕಡಿಮೆಯಿದ್ದರೂ ಅನ್ಲಾಕ್ ಆಗದ ಧಾರವಾಡ: ಗೊಂದಲಕ್ಕೀಡಾದ ಜನ