ಹುಬ್ಬಳ್ಳಿ:ರಾಜ್ಯದಲ್ಲಿ ಒಂದೆಡೆ ನಾಯಕತ್ವ ಬದಲಾವಣೆ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಇನ್ನೊಂದೆಡೆ ಸಿಎಂ ಬದಲಾವಣೆ ಇಲ್ಲವೆಂದು ಸಚಿವರಾದಿಯಾಗಿ ಹೈಕಮಾಂಡ್ ಸಹ ಸ್ಪಷ್ಟನೆ ನೀಡಿದೆ. ಆದ್ರೂ, ಸಿಎಂ ಬದಲಾವಣೆ ಪ್ರಶ್ನೆ ಪದೇ ಪದೆ ಕೇಳಿ ಬರ್ತಾ ಇರುವುದರಿಂದ ಸಿಎಂ ಕುರ್ಚಿ ಖಾಲಿಯಿಲ್ಲ ಅಂತಾ ಎದೆ ಮೇಲೆ ಬೋರ್ಡ್ ಹಾಕಿಕೊಂಡು ಓಡಾಡುವ ಸ್ಥಿತಿ ಬಂದಿದೆ ಎಂದು ಜಗದೀಶ್ ಶೆಟ್ಟರ್ ಖಾರವಾಗಿ ಪ್ರತಿಕ್ರಿಯೆ ನೀಡಿದರು.
‘ಸಿಎಂ ಕುರ್ಚಿ ಖಾಲಿಯಿಲ್ಲ’
ಶಾಸಕ ಅರವಿಂದ ಬೆಲ್ಲದ ಹಾಗೂ ಸಿಎಂ ಸ್ಥಾನ ಬದಲಾವಣೆಗೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಬದಲಾವಣೆ ವಿಚಾರವಾಗಿ ನಾನು ಪ್ರತಿಕ್ರಿಯೆ ನೀಡಲ್ಲ. ಇನ್ಮುಂದೆ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ ಅಂತಾ ಬೋಡ್೯ ಹಾಕಿಕೊಂಡು ಅಡ್ಡಾಡುವ ಪರಿಸ್ಥಿತಿ ಬಂದಿದೆ. ಅರವಿಂದ ಬೆಲ್ಲದ್ ಮುಂದಿನ ಸಿಎಂ ವಿಚಾರ ಈ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು. ಈ ವಿಚಾರ ರಾಜ್ಯಮಟ್ಟದಲ್ಲಿ ಚರ್ಚೆಯಾಗಿದೆ. ಯಾರಾದ್ರು ಕೆಮ್ಮಿದ್ರೆ ಅದಕ್ಕೆ ನಾನು ಹೊಣೆ ಆಗಬೇಕಾದ ಪರಿಸ್ಥಿತಿ ಬಂದಿದೆ. ಯಾರ್ಯಾರ ಹಣೆಯಲ್ಲಿ ಏನೇನ್ ಬರೆದಿರುತ್ತೋ ಅದು ಆಗೇ ಆಗುತ್ತೆ ಎಂದರು.
‘ಇಂದು ಸಂಜೆಯೊಳಗೆ ಅನ್ಲಾಕ್’
ಆರೋಗ್ಯ ಇಲಾಖೆ ಮತ್ತು ವಾರ್ ರೂಮಿನ ಸಮನ್ವಯದ ಕೊರತೆಯಿಂದ ತಪ್ಪಾಗಿದೆ. ಧಾರವಾಡ ಜಿಲ್ಲೆ ಅನ್ ಲಾಕ್ನಿಂದ ಹೊರಗೆ ಉಳಿದಿದೆ. ಇದರಲ್ಲಿ ಜಿಲ್ಲಾಡಳಿತದಿಂದ ಯಾವುದೇ ತಪ್ಪಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಜಿಲ್ಲೆ ಅನ್ಲಾಕ್ ಆಗದಿದ್ದರೆ ಆರ್ಥಿಕ ಚಟುವಟಿಕೆಗಳಿಗೆ ಹೊಡೆತ ಬೀಳಲಿದೆ. ಮುಖ್ಯಮಂತ್ರಿಗಳು, ಕಾಯದರ್ಶಿ ಹಾಗೂ ಸಚಿವ ಸುಧಾಕರ್ ಜೊತೆಗೆ ಮಾತನಾಡಿದ್ದೇನೆ. ಸಂಜೆ ವೇಳೆಗೆ ಸರಿ ಮಾಡುವಂತೆ ಹೇಳಿದ್ದೇನೆ. ಇಂದು ಜಿಲ್ಲೆ ಅನ್ಲಾಕ್ ಆಗಲಿದ್ದು, ಅಂತರ್ ಜಿಲ್ಲಾ ಬಸ್ ಸಂಚಾರ ನಾಳೆಯಿಂದ ಆರಂಭವಾಗಲಿದೆ ಎಂದರು. ನಿನ್ನೆ ನಾನು ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗಿಯಾಗಿರಲಿಲ್ಲ. ಒಂದು ವಾರದ ಪಾಸಿಟಿವಿಟಿ ರೇಟ್ ನೋಡಿ ಅನ್ಲಾಕ್ ನಿರ್ಧಾರ ಮಾಡ್ತಾರೆ. ಧಾರವಾಡ ಜಿಲ್ಲೆಯ ಒಂದು ವಾರದ ಅನ್ಲಾಕ್ ಪಾಸಿಟಿವ್ ವಿಟಿ ರೇಟ್ 4.1 ರಷ್ಟಿದೆ. ಹತ್ತು ದಿನದ ಪಾಸಿಟಿವಿಟಿ ರೇಟ್ ತಗೊಂಡ್ರು 4.5 ರಷ್ಟೇ ಇದೆ. ಆದ್ರೆ ನಿನ್ನೆ ಸಭೆಯಲ್ಲಿ 5.7 ರಷ್ಟು ಪಾಸಿಟಿವಿಟಿ ರೇಟ್ ಜಿಲ್ಲೆಯಲ್ಲಿದೆ ಎಂದು ಮಾಹಿತಿ ಕೊಟ್ಟಿದ್ದಾರೆ. ಇದರಿಂದ ಗೊಂದಲವಾಗಿದೆ ಎಂದರು.
‘ನಾಳೆಯಿಂದ ಉಚಿತ ಲಸಿಕೆ ಅಭಿಯಾನ’
ನಾಳೆಯಿಂದ ಉಚಿತ ಲಸಿಕಾ ಮೇಳ ಆರಂಭವಾಗಲಿದೆ. ಧಾರವಾಡ ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟವರಿಗೆ ನಾಳೆಯಿಂದ ಕೊರೊನಾ ವ್ಯಾಕ್ಸಿನ್ ಹಾಕಲಿದ್ದೇವೆ. ಜಿಲ್ಲೆಯ 201 ಕೇಂದ್ರಗಳಲ್ಲಿ ಲಸಿಕೆ ವಿತರಣೆ ಮಾಡಲಿದ್ದು, ಕೋವಿಶೀಲ್ಡ್ 38,020 ಹಾಗೂ ಕೋವ್ಯಾಕ್ಸಿನ್ 12,460 ಲಸಿಕೆ ಲಭ್ಯವಿದೆ. ನಾಳೆ 27 ಸಾವಿರ ಜನರಿಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಿದ್ದೇವೆ ಎಂದರು.
ಇದನ್ನೂ ಓದಿ:ಕೆಪಿಸಿಸಿ ಪುನಾರಚನೆ ಕಸರತ್ತು.. ದೆಹಲಿಗೆ ತೆರಳಿದ ಡಿಕೆಶಿ