ಹುಬ್ಬಳ್ಳಿ:ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಲಾಕ್ಡೌನ್ ಪರಿಶೀಲನೆಗೆ, ಆಧುನಿಕ ತಂತ್ರಜ್ಞಾನ ಬಳಸಿ ಹೊಸೂರಿನ ಬಿ.ಆರ್.ಟಿಎಸ್ ಮುಖ್ಯ ಕಛೇರಿಯಲ್ಲಿ ವಾರ್ರೂಮ್ ಸ್ಥಾಪಿಸಲಾಗಿದೆ.
ಇಂದು ಆ ವಾರ್ರೂಮ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಜಗದೀಶ್ ಶೆಟ್ಟರ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಹು-ಧಾ ಪೊಲೀಸ್ ಆಯುಕ್ತ ಆರ್. ದಿಲೀಪ್, ಬಿಆರ್ಟಿಎಸ್ ಹಾಗೂ ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿ, ಚಟುವಟಿಕೆಗಳನ್ನು ವೀಕ್ಷಿಸಿ ಸಲಹೆ ಸೂಚನೆ ನೀಡಿದರು.
ಬಿ.ಆರ್.ಟಿ.ಎಸ್ನ 50, ಪೊಲೀಸ್ ಹಾಗೂ ಮಹಾ ನಗರಪಾಲಿಕೆಯ 250 ಸೇರಿ ಒಟ್ಟು 300 ಸಿಸಿಟಿವಿ ಕ್ಯಾಮೆರಾಗಳನ್ನು ಅವಳಿನಗರದಲ್ಲಿ ಅಳವಡಿಸಲಾಗಿದೆ. ಇವುಗಳ ಕೇಂದ್ರಿಕೃತ ಮಾನಿಟರಿಂಗ್ ವ್ಯವಸ್ಥೆ ವಾರ್ರಾಮ್ನಲ್ಲಿ ನಡೆಯುತ್ತಿದೆ. ನಿಯಮ ಉಲ್ಲಂಘಿಸುವವರು, ಕ್ವಾರಂಟೈನ್ ಸೆಂಟರ್, ಆಸ್ಪತ್ರೆಗಳು, ಕೋವಿಡ್ ಸೋಂಕಿತರ ನಿವಾಸ ಸ್ಥಳಗಳು ಮೊದಲಾದ ಮಾಹಿತಿಯನ್ನು ಜಿಪಿಎಸ್ ಮೂಲಕ ಸುಲಭವಾಗಿ ಗುರುತಿಸುವ ವ್ಯವಸ್ಥೆಯನ್ನು ಬಿ.ಆರ್.ಟಿ.ಎಸ್ ಡಿ.ಜಿ.ಎಂ ಗಣೇಶ ರಾಠೋಡ್ ಅವರು ಸಚಿವರಿಗೆ ವಿವರಿಸಿದರು.
ಬಿಆರ್ಟಿಎಸ್ ಕೋವಿಡ್ ವಾರ್ ರೂಮ್ಗೆ ಸಚಿವ ಜಗದೀಶ್ ಶೆಟ್ಟರ್ ಭೇಟಿ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹಮದ್ ಮಾತನಾಡಿ, ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮಹಾನಗರಪಾಲಿಕೆ, ಬಿ.ಆರ್.ಟಿ.ಎಸ್ ಹಾಗೂ ಸ್ಮಾರ್ಟ್ ಸಿಟಿ ಸಿಬ್ಬಂದಿಯ ಸಮನ್ವಯದೊಂದಿಗೆ ಕಳೆದ ಮೂರು ತಿಂಗಳಿನಿಂದ ಪರಿಣಾಮಕಾರಿ ವಾರ್ ರೂಂ ಕಾರ್ಯನಿರ್ವಹಿಸುತ್ತಿದೆ. ಜಿಲ್ಲಾಡಳಿತ ಹೊರಡಿಸುವ ಎಲ್ಲಾ ಸಾರ್ವಜನಿಕ ಪ್ರಕಟಣೆ, ಸುತ್ತೋಲೆ, ಈ ಪಾಸ್, ಟೆಲಿಮೆಡಿಸಿನ್ , ಸಹಾಯವಾಣಿ ಸೇರಿದಂತೆ ಅನೇಕ ಸೌಕರ್ಯಗಳನ್ನು ಆನ್ಲೈನ್ ಮೂಲಕ ಸಾರ್ವಜನಿಕರಿಗೆ ಒದಗಿಸಲಾಗುತ್ತಿದೆ ಎಂದು ವಿವರಿಸಿದರು.
ವಾರ್ ರೂಮ್ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು ಹಾಗೂ ಜಿಲ್ಲಾಧಿಕಾರಿ, ಕೋವಿಡ್ ವೈರಾಣು ತೀವ್ರವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪ್ರಸ್ತುತವಾಗಿ ಲಭ್ಯವಿರುವ ಆಸ್ಪತ್ರೆಗಳು, ಕೋವಿಡ್ ಕೇರ್ ಸೆಂಟರ್ಗಳಲ್ಲಿ ಲಭ್ಯವಿರುವ ಹಾಸಿಗೆಗಳು, ಆ್ಯಂಬುಲೆನ್ಸ್, ವೈದ್ಯರ ಹಾಗೂ ಚಿಕಿತ್ಸೆ ಸೌಕರ್ಯಗಳು ಮಾಹಿತಿಯನ್ನು ಆನ್ಲೈನ್ನಲ್ಲಿ ನಮೂದಿಸುವಂತೆ ತಿಳಿಸಿದರು.