ಧಾರವಾಡ:ಕಾಂಗ್ರೆಸ್‌ನಲ್ಲಿ ಸಿಎಂ ಅಭ್ಯರ್ಥಿ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ. ನಮ್ಮ ಬಗ್ಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಟೀಕೆ ಮಾಡುತ್ತಿರುತ್ತಾರೆ. ಆದರೆ ಈಗ ಅವರೇ ಈಗ ಮುಂದಿನ ಸಿಎಂ ಯಾರು? ಅಂತಾ ಕಿತ್ತಾಡುತ್ತಿದ್ದಾರೆ ಎಂದರು.
ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಈಗ ಬಹುಮತದಲ್ಲಿ ಇಲ್ಲ. ಕಾಂಗ್ರೆಸ್‌ನ ಅಧಿಕಾರ ದಾಹ ಎಷ್ಟಿದೆ ಎನ್ನುವುದು ಇದರಿಂದ ಗೊತ್ತಾಗುತ್ತದೆ. ಡಿಕೆಶಿ, ಸಿದ್ದರಾಮಯ್ಯ ನಾವೆಲ್ಲ ಒಂದಾಗಿದ್ದೇವೆ ಎಂದು ಹೇಳಿದ್ದರು. ಆದರೆ ಇಂದು ಮುಂದಿನ ಸಿಎಂ ಪಟ್ಟಕ್ಕಾಗಿ ಗುದ್ದಾಟ ನಡೆಸುತ್ತಿದ್ದಾರೆ. ಬಹುಶಃ ಈ ಕಾಂಗ್ರೆಸ್‌ನ ಹಣೆಬರಹವೇ ಇಷ್ಟು ಎಂದು ಕುಹಕವಾಡಿದರು.
ರಾಜಕೀಯವನ್ನಷ್ಟೇ ಮಾಡುತ್ತಿದ್ದಾರೆ:
ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿ ಜನಪರ ಕಾಳಜಿ ಮಾಡಬೇಕಿದೆ. ಸರ್ಕಾರಕ್ಕೆ ರಚನಾತ್ಮಕ ಸಲಹೆ ಕೊಡಬೇಕಿತ್ತು. ಆದರೆ ಇವರು ರಾಜಕೀಯವನ್ನಷ್ಟೇ ಮಾಡುತ್ತಿದ್ದಾರೆ ಎಂದರು. ಇದೇ ವೇಳೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡುವರೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ಅದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಶೆಟ್ಟರ್ ಹೇಳಿದರು.
ಕೊರೊನಾ ಮೂರನೇ ಅಲೆ ವಿಚಾರವಾಗಿ ಮಾತನಾಡಿದ ಸಚಿವರು, 3ನೇ ಅಲೆಗಾಗಿ ಎಲ್ಲ ಮುಂಜಾಗ್ರತಾ ಸಭೆಗಳನ್ನು ಮಾಡುತ್ತಿದ್ದೇವೆ. ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. 3ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ತೊಂದರೆಯಾಗುವ ಸಂಭವ ಇದೆ. ಹೀಗಾಗಿ ಇನ್ನೂ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ.
ಡಾ. ದೇವಿಪ್ರಸಾದ್ ಶೆಟ್ಟಿಯವರ ವರದಿ ಅಧಾರದ ಮೇಲೆ ಸಿಎಂ ಸಭೆ ನಡೆಸಿದ್ದಾರೆ. ಜಿಲ್ಲಾ ಮಟ್ಟದಲ್ಲಿಯೂ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಕಾಳಜಿ ವಹಿಸುತ್ತೇವೆ ಎಂದರು.
ಓದಿ:ನಮ್ಮಲ್ಲಿ ಮೂಲ ಮತ್ತು ವಲಸಿಗರೆಂಬ ಭಿನ್ನಾಭಿಪ್ರಾಯವಿಲ್ಲ, ಅದೇನಿದ್ದರು ಕಾಂಗ್ರೆಸ್‌ನಲ್ಲಿ: ಕಟೀಲ್ ತಿರುಗೇಟು