ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷರು ಜೈಲಿನಿಂದ ಜಾಮೀನು ಪಡೆದು ಹೊರ ಬಂದಿದ್ದಾರೆ. ಅವರ ಮೇಲಿನ ಪ್ರಕರಣಗಳು ಇನ್ನೂ ಕ್ಲಿಯರ್ ಆಗಿಲ್ಲ. ಜೈಲಿನಲ್ಲಿದ್ದು ಹೊರ ಬಂದವರಿಗೆ ಇನ್ನೊಬ್ಬರ ನೈತಿಕತೆಯ ಬಗ್ಗೆ ಮಾತಾಡುವ ಅಧಿಕಾರವಿಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ಕಿಡಿ ಕಾರಿದ್ದಾರೆ.
ನಗರದಲ್ಲಿಂದು ಹು-ಧಾ ಸ್ಮಾರ್ಟ್ ಸಿಟಿ ಯೋಜನೆಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ನೇರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ ಅವರಿಂದ ಫೋನ್ ಟ್ಯಾಪಿಂಗ್ ಆರೋಪ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು.
ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕರ ಮನೆಯ ಮೇಲೆಯೇ ಗಲಭೆ ನಡೆದಿದೆ. ಆದರೆ ಈ ಘಟನೆಯನ್ನು ಕಾಂಗ್ರೆಸ್ ನಾಯಕರು ಯಾರೂ ಖಂಡಿಸಿಲ್ಲ. ಗೂಂಡಾಗಳ ಬೆನ್ನಿಗೆ ನಿಂತು ಪೊಲೀಸ್ ಆಯುಕ್ತರಿಗೆ ಧಮ್ಕಿ ಹಾಕಿದ್ದಾರೆಂದು ಆರೋಪಿಸಿದರು.
ಕಾಂಗ್ರೆಸ್‌ನವರು ತುಷ್ಟೀಕರಣ ರಾಜಕೀಯದಿಂದ ದೇಶವನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಮೊದಲು ಬೆಂಗಳೂರು ಗಲಭೆ ಘಟನೆಯನ್ನು ಖಂಡಿಸುವ ಕೆಲಸ ಮಾಡಲಿ. ಗಲಭೆಕೋರರಿಗೆ ಜಮೀರ್ ಅಹ್ಮದ್ ಪರಿಹಾರಧನ ನೀಡಿದ್ದಾರೆ. ಜಮೀರ್ ಅವರ ನಡೆಯ ಬಗ್ಗೆ ಕಾಂಗ್ರೆಸ್ ನೀಲುವೇನು ಎಂದು ಅವರು ಪ್ರಶ್ನಿಸಿದರು.
ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಸುಭದ್ರವಾಗಿದೆ. ಉತ್ತಮ ಕೆಲಸ ಮಾಡುತ್ತಿದೆ. ಸರ್ಕಾರದ ಯಶಸ್ಸು ಸಹಿಸದ ವಿರೋಧಿಗಳು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.