ಧಾರವಾಡ:ಎಸ್ಸಿ ಮತ್ತು ಎಸ್ಟಿ ಮಕ್ಕಳಿಗೆ ಸೀಟು ಖಾಲಿ ಇಲ್ಲ ಎಂದು ಹೇಳಿ ಅವರಿಗೆ ಹಾಸ್ಟೆಲ್ ನಿರಾಕರಿಸಬಾರದು ಎಂದು ಸುತ್ತೋಲೆ ಹೊರಡಿಸಿದ್ದೇವೆ. ಇದರ ಉದ್ದೇಶ ಶಿಕ್ಷಣವನ್ನು ಉತ್ತೇಜಿಸುವುದು ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹದೇವಪ್ಪ ಹೇಳಿದರು. ಧಾರವಾಡದ ಹಾಸ್ಟೆಲ್ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧಾರವಾಡ ಹಾಸ್ಟೆಲ್‌ನಲ್ಲಿ ಅಗತ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. 450 ವಿದ್ಯಾರ್ಥಿಗಳಿಗೆ ಮಾತ್ರ ಹಾಸ್ಟೆಲ್‌ನಲ್ಲಿ ತಂಗಲು ಅವಕಾಶವಿದೆ. ಆದರೆ, ಇಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ ಎಂದರು.
ಇನ್ನೊಂದಿಷ್ಟು ಕೊಠಡಿಗಳನ್ನು ನಿರ್ಮಾಣ ಮಾಡುತ್ತೇವೆ. ಊಟವನ್ನು ಚೆನ್ನಾಗಿ ಕೊಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ನಮ್ಮ ಸರ್ಕಾರದ ಆದ್ಯತೆ ಎಂದರೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಪೌಷ್ಟಿಕಾಂಶಯುಕ್ತ ಆಹಾರ ಕೊಡುವುದು ಎಂದರು. ಕೆಲವು ವಿದ್ಯಾರ್ಥಿಗಳು ಹಾಸಿಗೆ ಸಮೇತ ಗ್ರಂಥಾಲಯದಲ್ಲಿ ಇರುವುದರ ಬಗ್ಗೆ ಮಾತನಾಡಿ, ಕೊಠಡಿಗಳಲ್ಲಿ ಏಳೆಂಟು ವಿದ್ಯಾರ್ಥಿಗಳಿರುವುದರಿಂದ ಕೆಲವರು ಗ್ರಂಥಾಲಯದಲ್ಲಿ ಹೆಚ್ಚು ಓದುತ್ತಿದ್ದಾರೆ. ಹೀಗಾಗಿ ಅಲ್ಲಿಯೇ ಇರಬಹುದು ಎಂದು ಹೇಳಿದರು.
ನಾವು ಹೆಚ್ಚು ಹಾಸ್ಟಲ್ಗಳನ್ನು ತೆರೆಯಬೇಕು, ಯಾವುದೇ ವಿದ್ಯಾರ್ಥಿಯನ್ನು ಫೀಸ್ ಕಟ್ಟಿಲ್ಲ ಎಂದು ಶಾಲೆಗೆ ದಾಖಲಿಸಿಕೊಳ್ಳುವುದನ್ನು ನಿರಾಕರಣೆ ಮಾಡಬಾರದು ಎಂದು ಈಗಾಗಲೇ ಸುತ್ತೋಲೆ ಹೊರಡಿಸಿದ್ದೇವೆ ಎಂದರು. ಕಿಯೋನಿಕ್ಸ್ ಎಂಡಿಯನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿರುವುದರ ಕುರಿತು ಮಾತನಾಡಿ, ಅವರ ವಿರುದ್ಧ ದೂರು ಕೊಟ್ಟಿದ್ದರೆ ತನಿಖೆಯಾಗುತ್ತದೆ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.