ದಾವಣಗೆರೆ:ನಾವು ಜಾತಿಗಣತಿ ವಿರೋಧಿಗಳಲ್ಲ, ಜಾತಿ ಗಣತಿ ವಾಸ್ತವತೆ, ಸತ್ಯದಿಂದ ಕೂಡಿರಬೇಕು ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು. ನಗರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನದಲ್ಲಿ ಮಾತನಾಡಿದ ಅವರು, ಜಾತಿ ಜನಗಣತಿ ವಾಸ್ತವಾಂಶದಿಂದ ಕೂಡಿಲ್ಲ. ಈಗ ಮಾಡಿರುವ ಜಾತಿ ಜನಗಣತಿ ವೈಜ್ಞಾನಿಕವಾಗಿಲ್ಲ. ಹೀಗಾಗಿ ಲಿಂಗಾಯತ 93 ಒಳಪಂಗಡ ಸೇರಿಕೊಂಡು ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ. ಸತ್ಯಾಸತ್ಯತೆ ಅರಿತು ಸರ್ಕಾರದಿಂದ ಮತ್ತೊಮ್ಮೆ ಜಾತಿ ಜನಗಣತಿ ಮಾಡಿಸಬೇಕು ಎಂದು ಸಿಎಂಗೆ ಹೇಳಿದ್ದೇನೆ ಎಂದರು.
ಮುಂದುವರೆದು, ನಾವು ಜಾತಿ ಜನಗಣತಿ ವಿರೋಧಿಗಳಲ್ಲ, ನಾವೆಲ್ಲ ಬಸವತತ್ವಕ್ಕೆ ಬೆಲೆ ಕೊಡುವವರು, ಆದರೆ ಜಾತಿ ಜನಗಣತಿ ವೈಜ್ಞಾನಿಕವಾಗಿ ಮಾಡಬೇಕು ಅನ್ನುವುದು ನಮ್ಮ ಒತ್ತಾಯ ಆಗಿದೆ. ಲಿಂಗಾಯುತರಲ್ಲಿ ಒಗ್ಗಟ್ಟಿನ ಕೊರತೆಯಿದೆ. ನಾವೆಲ್ಲ ಒಂದಾಗಿ ನಡೆದರೆ ರಾಜ್ಯ ಕೂಡ ಸರಿ ದಾರಿಯಲ್ಲಿ ಹೋಗುತ್ತದೆ. ವೀರಶೈವ ಲಿಂಗಾಯತರಿಗೆ ರಾಜ್ಯದಲ್ಲಿ ಒಬಿಸಿ ಪಟ್ಟಿಯಲ್ಲಿ 3ಬಿ, ಹಾಗೂ ಈಗಾಗಲೇ 5%ರಷ್ಟು ಮೀಸಲಾತಿ ಇದೆ. ಆದರೆ ದುದೃಷ್ಟವಶಾತ್ ರಾಜ್ಯದಲ್ಲಿ ಇರುವ ಮೀಸಲಾತಿ ಕೇಂದ್ರದಲ್ಲಿ ಇಲ್ಲ. ಕೇಂದ್ರದ ಒಬಿಸಿ ಪಟ್ಟಿಯಲ್ಲಿ 27% ಮೀಸಲಾತಿ ಇದೆ. ಆದರೆ 27 ಶೇಕಡದಲ್ಲಿ ಲಿಂಗಾಯುತ ಸಮುದಾಯ 1990ರಲ್ಲಿ ಬಿದ್ದು ಹೋಗಿದೆ.
ಹೀಗಾಗಿ ಅಖಿಲ ಭಾರತ ವೀರಶೈವ ಮಹಾಸಭಾದಿಂದ ಸುಮಾರು ವರ್ಷಗಳಿಂದ ಸತತವಾಗಿ ಅಧಿಕಾರಕ್ಕೆ ಬರುತ್ತಿರುವ ಸರ್ಕಾರ ಮೇಲೆ ಮೀಸಲಾತಿಗಾಗಿ ಒತ್ತಡ ಹಾಕಿದ್ದೇವೆ. ಮನವಿ ಕೂಡ ಮಾಡಿದ್ದೇವೆ. ನಮ್ಮ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಚಿನ್ನಪ್ಪರೆಡ್ಡಿ ಆಯೋಗ ಇದೆ. ಈ ಆಯೋಗದಲ್ಲಿ ನಮಗಿಂತ ಅಭಿವೃದ್ಧಿ ಹೊಂದಿರುವ ಸಮುದಾಯಗಳು ಈ ಒಬಿಸಿ ಪಟ್ಟಿಯಲ್ಲಿವೆ. ಅದೇ ಮಾನದಂಡದ ಮೇಲೆ ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಒಳಪಂಗಡಗಳನ್ನು ಸೇರಿಸಿ ಕೇಂದ್ರದ 27% ಒಬಿಸಿ ಪಟ್ಟಿಯಲ್ಲಿ ಸೇರಿಸಲು ರಾಜ್ಯ ಸರ್ಕಾರ ಶಿಫಾರಸು ಮಾಡಲು ಕೇಂದ್ರ ಒಪ್ಪಿಗೆ ನೀಡಬೇಕಾಗಿದೆ ಎಂಬುದು ನಮ್ಮ ಸಮುದಾಯದ ಹಕ್ಕೊತ್ತಾಯವಾಗಿದೆ ಎಂದರು.