ಧಾರವಾಡ :ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಸಂಬಂಧ ಧಾರವಾಡದಲ್ಲಿ ಇಂದು ಬೆಳಗ್ಗೆಯಿಂದ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಅವರು, ಸಂಜೆ ಬೆಂಗಳೂರಿಗೆ ಹೊರಡುವ ಮುನ್ನ ಹಿರಿಯ ಕವಿ ಚನ್ನವೀರ ಕಣವಿ ಅವರನ್ನು ಭೇಟಿಯಾದರು.
ಧಾರವಾಡದ ಕಲ್ಯಾಣ ನಗರದಲ್ಲಿನ ಕಣವಿ ಅವರ ನಿವಾಸಕ್ಕೆ ತೆರಳಿದ ಸಚಿವರು, ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಅವರಿಗೆ ವಿವರಿಸಿದರು. ಸಚಿವರು ಹೇಳಿದ್ದೆಲ್ಲವನ್ನೂ ಸಾವಕಾಶವಾಗಿ ಕೇಳಿಸಿಕೊಂಡ ಕಣವಿಯವರು, ‘ರಾಷ್ಟ್ರೀಯ ಶಿಕ್ಷಣ ನೀತಿ ಸಮಗ್ರವಾಗಿದೆ. ಉತ್ತಮವಾಗಿ ಜಾರಿಗೆ ಬರಲಿ. ಆದರೆ, ಕನ್ನಡಕ್ಕೆ ಹಾಗೂ ಮಾತೃಭಾಷೆ ಶಿಕ್ಷಣಕ್ಕೆ ಎಲ್ಲೂ ಧಕ್ಕೆ ಆಗದಂತೆ ಜಾರಿ ಆಗಲಿ’ ಎಂದು ಹೇಳಿದರು.