ಹುಬ್ಬಳ್ಳಿ:ಕಾಂಗ್ರೆಸ್ ರೈತರ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಆದರೆ ಬಿಜೆಪಿ ಯಾವಾಗಲೂ ರೈತರ ಪರವಿದೆ ಎಂದು ಸಚಿವ ಅಶ್ವತ್ಥ್ ನಾರಾಯಣ್ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ನಡೆದ ಘಟನೆಯ ಬಗ್ಗೆ ಅಲ್ಲಿನ ಸರ್ಕಾರ ಸೂಕ್ತ ಕ್ರಮ ವಹಿಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದೆ. ಸರ್ಕಾರ ಕ್ರಮ ವಹಿಸಿ ಸಮಸ್ಯೆಯನ್ನು ತಿಳಿಗೊಳಿಸುವ ಕಾರ್ಯ ಮಾಡುತ್ತಿದೆ ಎಂದು ಸಮರ್ಥನೆ ನೀಡಿದರು.
ರೈತರು ಸಬಲೀಕರಣ ಆಗಬಾರದು. ಅವರು ಉನ್ನತಿ ಹೊಂದಬಾರದು ಅನ್ನೋದು ಕಾಂಗ್ರೆಸ್ನವರ ಕಲ್ಪನೆ. ಅವರ ಕಲ್ಪನೆ ಇಟ್ಟುಕೊಂಡು ರಾಜಕೀಯ ಲಾಭ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ನಾವೆಲ್ಲ ಅನ್ನದಾತರ ಕುಟುಂಬಕ್ಕೆ ಸೇರಿದವರು. ರೈತರ ಶಕ್ತಿ ಹೆಚ್ಚಿಸಲು ಸುಧಾರಣೆಗಳು ಪೂರಕವಾಗಿವೆ. ಕುತಂತ್ರ, ತಂತ್ರಗಾರಿಕೆ ಮೂಲಕ ದಾರಿ ತಪ್ಪಿಸುವ ಪ್ರಯತ್ನವನ್ನ ಪ್ರತಿಪಕ್ಷ ಮತ್ತು ಕೆಲವು ಸಂಘಟನೆಗಳು ಮಾಡುತ್ತಿವೆ ಎಂದು ಆರೋಪಿಸಿದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರರನ್ನ ತಡವಾಗಿ ಉಪಚುನಾವಣೆ ಪಟ್ಟಿಗೆ ಸೇರಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಎಲ್ಲರೂ ಪಕ್ಷದವರೇ. ಪ್ರತ್ಯೇಕವಾಗಿ, ವಿಶೇಷವಾಗಿ ಬೆಳಕನ್ನ ಚೆಲ್ಲೋದು ಅಷ್ಟು ಸೂಕ್ತವಲ್ಲ. ಎಲ್ಲರಿಗೂ ಪಕ್ಷದಲ್ಲಿ ಸ್ಥಾನಮಾನವಿದೆ. ಎಲ್ಲರಿಗೂ ಜವಾಬ್ದಾರಿ ಇದೆ. ರಾಜಕೀಯದಲ್ಲಿ ಎಲ್ಲರಿಗೂ ಅವಕಾಶ ಇದ್ದೇ ಇರುತ್ತೆ ಎಂದರು.
'ಸಿದ್ದರಾಮಯ್ಯ ಸರ್ಕಾರ ಬಂದ್ರೆ ಮತ್ತೆ ಜಾತಿಗಣತಿ' ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶ್ವತ್ಥ್ ನಾರಾಯಣ್, ಅವರು ಅಧಿಕಾರಕ್ಕೆ ಬರಲ್ಲ. ಅವರ ಪಕ್ಷ ಈಗಾಗಲೇ ಹರಿದು ಹಂಚಿಹೋಗಿದೆ. ಸಿಎಂ ಸ್ಥಾನಕ್ಕೆ ಈಗಲೇ ಅವರರವರಲ್ಲೇ ಜಗಳ ಶುರುವಾಗಿದೆ. ಕೇವಲ ಗೊಂದಲ ನಿರ್ಮಾಣ ಮಾಡಬೇಕು. ಸಮಾಜ ಒಡೆಯಬೇಕು ಇಂತಹ ಯೋಚನೆಗಳು ಅವರಲ್ಲಿವೆ. ಉತ್ತಮ ಆಡಳಿತ ಉತ್ತಮ ಸೇವೆ ಕೊಡಬೇಕು ಅನ್ನೋ ಕಲ್ಪನೆ ಇಲ್ಲದ ಪಕ್ಷ ಮತ್ತು ನಾಯಕರವರು. ಅವರ ಕಾಲದಲ್ಲಿ ವರದಿ ಬಂದಾಗ ಯಾಕೆ ಸಹಿ ಮಾಡದೆ ಕುಳಿತಿದ್ರು ಅಂತ ಅವರನ್ನೇ ಕೇಳಬೇಕು ಎಂದು ಕಿಡಿಕಾರಿದರು.