ಹುಬ್ಬಳ್ಳಿ:ಅಂತಾರಾಜ್ಯ ಗಡಿ ವಿವಾದ ಇತ್ಯರ್ಥವಾಗಿದ್ದರೂ ಅದನ್ನು ಮಹಾರಾಷ್ಟ್ರದವರು ಪದೇ ಪದೆ ಎತ್ತುತ್ತಿರುವುದು ರಾಜಕೀಯ ಪ್ರೇರಿತವೇ ಹೊರತು ಇನ್ನೇನೂ ಅಲ್ಲ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ನಿಪ್ಪಾಣಿ, ಕಾರವಾರ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳನ್ನು ಸೇರಿಸಿ ಕೇಂದ್ರಾಡಳಿತ ಪ್ರದೇಶವಾಗಿಸಬೇಕು ಎಂಬ ಮಹಾರಾಷ್ಟ್ರದ ರಾಜಕಾರಣಿಗಳ ಹೇಳಿಕೆಗೆ ನಗರದಲ್ಲಿಂದು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಇಂಥ ಹೇಳಿಕೆಗಳು ಬಾಲಿಶ. ಮುಂಬೈನಲ್ಲಿ ಮರಾಠಿ ಜನರು ಎಷ್ಟಿದ್ದಾರೆ ಎಂದು ಕೇಳಿದರೆ ಅವರೇ ಗೊಂದಲಕ್ಕೀಡಾಗುತ್ತಾರೆ ಎಂದರು.
ಮುಂಬೈಯಲ್ಲಿ ಮರಾಠಿಗರ ಸಂಖ್ಯೆ ಕೇಳಿದ್ರೆ ಅವರಿಗೇ ಗೊಂದಲ ಉಂಟಾಗುತ್ತದೆ: ಅಶ್ವತ್ಥನಾರಾಯಣ
ಗಡಿ ಕ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರ ರಾಜಕೀಯ ಧುರೀಣರ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ಸಚಿವ ಅಶ್ವತ್ಥನಾರಾಯಣ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.
ಸ್ವಾರ್ಥಕ್ಕಾಗಿ ರಾಜಕೀಯ ಮಾಡುವ ವ್ಯಕ್ತಿಗಳು ಸಮಾಜಕ್ಕೆ ಭಾರ. ಇದನ್ನು ಮಹಾರಾಷ್ಟ್ರದ ಧುರೀಣರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು. ರಾಜ್ಯದಲ್ಲಿ ಅವಧಿಗೂ ಮುನ್ನವೇ ಚುನಾವಣೆ ನಡೆಯಲಿದೆ. ಹೀಗಾಗಿ, ಆಡಳಿತಾರೂಢ ಬಿಜೆಪಿ ಸರ್ಕಾರ ಕೋವಿಡ್ ಎಂಬ ಭೂತವನ್ನು ಬಿಡುತ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿ, ಭಾರತವಷ್ಟೇ ಅಲ್ಲ, ಇಡೀ ವಿಶ್ವದಲ್ಲಿಯೇ ಕೋವಿಡ್ ಹೊಸ ತಳಿಗಳು ಬರುತ್ತಿರುತ್ತವೆ. ಇಂಥ ಸ್ಥಿತಿಯಲ್ಲಿಯೂ ಇವರಿಗೆ ರಾಜಕೀಯ, ಚುನಾವಣೆ ಬಿಟ್ಟರೆ ಬೇರೇನೂ ಇಲ್ಲವೇ? ಎಂದು ಟೀಕಿಸಿದರು.
ಇದನ್ನೂ ಓದಿ:ಬೊಮ್ಮಾಯಿಗೆ ಪಂಚಮಸಾಲಿಗರ ಮೀಸಲಾತಿ ತಲೆಬಿಸಿ; ಬಿಜೆಪಿ ಸರ್ಕಾರದ ಮುಂದಿರುವ ಲೆಕ್ಕಾಚಾರಗಳೇನು?