ಹುಬ್ಬಳ್ಳಿ: ಸರ್ಕಾರದ ಯೋಜನೆಗಳನ್ನು ಪಡೆಯಲು ಜನರು ನಕಲಿ ಆಧಾರ್, ವೋಟರ್ ಐಡಿ ಸೇರಿದಂತೆ ಅನೇಕ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಸಿಕ್ಕಿಬಿದ್ದ ಸಾಕಷ್ಟು ನಿದರ್ಶನಗಳಿವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸುವ ಶಕ್ತಿ ಯೋಜನೆಯ ಲಾಭ ಪಡೆಯಲು ತನ್ನ ವೇಷ ಬದಲಿಸಿಕೊಂಡಿದ್ದಾನೆ. ಬುರ್ಖಾ ಧರಿಸಿಕೊಂಡ ಪುರುಷ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕುಂದಗೋಳ ತಾಲೂಕಿನ ಸಂಶಿ ಬಸ್ ನಿಲ್ದಾಣದಲ್ಲಿ ಘಟನೆ ನಡೆಯಿತು. ಗ್ರಾಮದ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಪ್ರಯಾಣಿಕರು ಹಾಗೂ ಗ್ರಾಮಸ್ಥರು, ಬುರ್ಖಾಧಾರಿಯ ಬಗ್ಗೆ ಸಂಶಯ ವ್ಯಕ್ತಪಡಿಸಿ ಬುರ್ಖಾ ತೆಗೆಸಿದಾಗ ಸತ್ಯ ಬೆಳಕಿಗೆ ಬಂದಿದೆ.
ಸಾರ್ವಜನಿಕರು ಈ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ, ಆತ, "ನಾನು ಭಿಕ್ಷಾಟನೆಗೆ ಬಂದಿದ್ದೇನೆ. ನನ್ನ ಹೆಸರು ವೀರಭದ್ರಯ್ಯ ನಿಂಗಯ್ಯ ಮಠಪತಿ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಘೋಡಗೋರಿ ಗ್ರಾಮದವನು" ಎಂದು ಹೇಳಿದ್ದಾನೆ. ವೀರಭದ್ರಯ್ಯನ ಬಳಿ ಮಹಿಳೆಯ ಆಧಾರ್ ಕಾರ್ಡ್ ನಕಲು ಪ್ರತಿ ಸಿಕ್ಕಿದೆ. ಆರೋಪಿಯನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಕುಂದಗೋಳ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.