ಹುಬ್ಬಳ್ಳಿ :ಕೊರೊನಾ ಮೂರನೇ ಅಲೆಯ ಆತಂಕ ಜನರನ್ನು ಕಾಡುತ್ತಿದೆ. ಎರಡು ಡೋಸ್ ಲಸಿಕೆ ಪಡೆದವರಿಗೂ ಕೋವಿಡ್ ತಗುಲುತ್ತಿದೆ. ಹೀಗಿದ್ದಾಗ, ವ್ಯಾಕ್ಸಿನ್ ಮೇಲೆ ಭರವಸೆ ಇಡುವುದು ಹೇಗೆ ಎಂದು ವ್ಯಕ್ತಿಯೊಬ್ಬರು ಪ್ರಶ್ನಿಸಿದ್ದಾರೆ.
ಲಸಿಕೆ ಗ್ಯಾರೆಂಟಿ ಪತ್ರ ಪಡೆದು ವ್ಯಾಕ್ಸಿನ್ ಹಾಕಿಸಿಕೊಂಡ ವ್ಯಕ್ತಿ.. ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಳವಾದ ಹಿನ್ನೆಲೆ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ನೇತೃತ್ವದಲ್ಲಿ ಪಾಲಿಕೆ ಕಚೇರಿಯಲ್ಲಿ ತುರ್ತು ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಶಾಪಿಂಗ್ ಮಾಲ್, ಜಿಮ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಮಲ್ಟಿಪ್ಲೆಕ್ಸ್, ಸಿನಿಮಾ ಮಂದಿರಗಳ ಮಾಲೀಕರು, ಧಾರ್ಮಿಕ ಮುಖಂಡರು ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಆನಂದ್ ಕುಂದನೂರು ಎಂಬುವರು ಕೋವಿಡ್ ಲಸಿಕೆ ಪಡೆದರೆ ಆರೋಗ್ಯದಲ್ಲಿ ಏನು ಸಮಸ್ಯೆ ಕಾಣುವುದಿಲ್ಲ ಎಂದು ಪತ್ರದಲ್ಲಿ ಬರೆದು ಕೊಟ್ಟರೆ ಮಾತ್ರ ವ್ಯಾಕ್ಸಿನ್ ಹಾಕಿಸಿಕೊಳ್ಳುವುದಾಗಿ ಹಠ ಹಿಡಿದರು. ಆಗ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು ಪತ್ರಕ್ಕೆ ಸಹಿ ಹಾಕಿ ಕೊಟ್ಟರು.
ಬಳಿಕ ವ್ಯಕ್ತಿ ಡಿಸಿ, ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ ಸೇರಿದಂತೆ ಪಾಲಿಕೆ ಅಧಿಕಾರಿಗಳ ಸಮ್ಮುಖದಲ್ಲಿ ಲಸಿಕೆ ಪಡೆದುಕೊಂಡರು.
ಇದನ್ನೂ ಓದಿ: ನೀರಿನ ಟ್ಯಾಂಕ್ ಸ್ವಚ್ಛ ಮಾಡುವಾಗ ಉಸಿರುಗಟ್ಟಿ ಇಬ್ಬರು ಸಾವು : ಓರ್ವನ ಸ್ಥಿತಿ ಚಿಂತಾಜನಕ