ಹುಬ್ಬಳ್ಳಿ:ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಟಿಕೆಟ್ ಸಿಗದ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭಾನುವಾರ ಬಿಜೆಪಿಯಿಂದ ಹೊರ ಬಂದಿದ್ದಾರೆ. ಶೆಟ್ಟರ್ ಸತತವಾಗಿ ಆರು ಬಾರಿ ಜಯಭೇರಿ ಬಾರಿಸಿದ್ದರು. ಹೀಗಾಗಿ ಬಿಜೆಪಿಯಲ್ಲಿ ಇಷ್ಟು ವರ್ಷಗಳ ಕಾಲ ಶೆಟ್ಟರ್ ವಿರುದ್ಧ ಟಿಕೆಟ್ಗಾಗಿ ಪೈಪೋಟಿ ಇರಲಿಲ್ಲ. ಆದರೆ, ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿರಾಕರಣೆ ಮಾಡಿರುವುದರಿಂದ ಶೆಟ್ಟರ್ ಬಂಡಾಯ ಎದ್ದು ಪಕ್ಷಕ್ಕೂ ರಾಜೀನಾಮೆ ನೀಡುವ ಬಗ್ಗೆ ಪ್ರಕಟಿಸಿದ್ದಾರೆ. ಆದ್ದರಿಂದ ಇದೀಗ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿ ಬೆಳೆಯುತ್ತಿದೆ.
ಇದನ್ನೂ ಓದಿ:ಶೆಟ್ಟರ್ ವಿರುದ್ಧ ಪಿತೂರಿ ನಡೆದಿಲ್ಲ, ಉಳಿಸಿಕೊಳ್ಳುವ ಎಲ್ಲಾ ಪ್ರಯತ್ನ ನಡೆಸಿದ್ರೂ ಹೊರ ಹೋಗುತ್ತಿದ್ದಾರೆ : ಕಟೀಲ್
ಬಿಜೆಪಿಯಲ್ಲಿ ಶಾಸಕ, ಪ್ರತಿಪಕ್ಷ ನಾಯಕ, ಸಚಿವ, ಸ್ಪೀಕರ್, ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಸೇರಿ ಪಕ್ಷ ಹಾಗೂ ಸರ್ಕಾರದ ಹಂತಗಳಲ್ಲಿ ಜವಾಬ್ದಾರಿ ನಿರ್ವಹಣೆ ಮಾಡಿರುವ ಅನುಭವ ಹೊಂದಿದ್ದು, ಏಕಾಏಕಿ ಟಿಕೆಟ್ ನಿರಾಕರಣೆ ಮಾಡಿರುವುದು ಶೆಟ್ಟರ್ ಅಸಮಾಧಾನಕ್ಕೆ ಕಾರಣವಾಗಿದೆ. ಎರಡು ತಿಂಗಳು ಮುಂಚೆಯೇ ಟಿಕೆಟ್ ಬಗ್ಗೆ ಕುರಿತು ಹೇಳಿದ್ದರೆ ಗೌರವ ಇರುತ್ತಿತ್ತು. ರಾಜಕೀಯದಲ್ಲಿ ನಿವೃತ್ತಿಯಾದರೂ ಗೌರವಯುತವಾಗಿ ಆಗಬೇಕಿರಬೇಕೆಂದು ಅವರು ಹೇಳಿದ್ದರು. ಇದರ ನಂತರದಲ್ಲಿ ಅನೇಕ ಸಂಧಾನಗಳು ನಡೆದರೂ ಅದು ಸಫಲವಾಗಿಲ್ಲ. ಜೊತೆಗೆ ಬಿಜೆಪಿ ತೊರೆದರೂ ಸಹ ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು ನಿಶ್ಚಿತ ಎಂದು ಶೆಟ್ಟರ್ ಘೋಷಿಸಿದ್ದಾರೆ.
ಮುಂದೆ ಬಿಜೆಪಿ ಟಿಕೆಟ್ ಯಾರಿಗೆ?:ಈ ಬಾರಿ ಚುನಾವಣೆಯಲ್ಲಿಸ್ಪರ್ಧೆ ಮಾಡಲೇಬೇಕೆಂಬಶೆಟ್ಟರ್ ತೀರ್ಮಾನದಿಂದ ಉಂಟಾದ ಬಿಕ್ಕಟ್ಟಿನ ಕಾರಣಕ್ಕೆ ಇದುವರೆಗೆ ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿಲ್ಲ. ಈಗಶೆಟ್ಟರ್ ಹೊರ ಬಂದಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಮುಂದಿನ ಬಿಜೆಪಿ ಟಿಕೆಟ್ ಯಾರಿಗೆ ಸಿಗಲಿದೆ ಎಂಬುದು ಕುತೂಹಲ ಕಾರಣವಾಗಿದೆ. ಇದರ ಬೆನ್ನಲ್ಲೇ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಹಾಗೂ ಮುಖಂಡರಾದ ಮಹೇಶ ನಾಲವಾಡ, ಜಯತೀರ್ಥ ಕಟ್ಟಿ ಸೇರಿದಂತೆ ಹಲವು ನಾಯಕರು ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ.