ಹುಬ್ಬಳ್ಳಿ :ಬಿಜೆಪಿ ಗ್ರಾಮೀಣ ಅಧ್ಯಕ್ಷ ಬಸವರಾಜ ಕುಂದಗೋಳಮಠ ಅವರಿಗೂ ಪಕ್ಷದಿಂದ ಸಾಕಷ್ಟು ಅನ್ಯಾಯವಾಗಿದೆ. ಈ ನಿಟ್ಟಿನಲ್ಲಿ ಯಾರೋ ಬರೆದುಕೊಟ್ಟಿರುವ ಪತ್ರವನ್ನು ಬಹಿರಂಗಪಡಿಸಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಬಿಜೆಪಿ ಸಭೆಯ ಬಳಿಕ ಮಾತನಾಡಿದ ಅವರು, ನನಗೆ ಆಗಿರುವ ಅನ್ಯಾಯದ ಬಗ್ಗೆ ನಾನು ನಿನ್ನೆಯಷ್ಟೇ ಮಾತನಾಡಿದ್ದೇನೆ. ಅಲ್ಲದೇ ಈ ಬಗ್ಗೆ ಬಿಜೆಪಿ ವರಿಷ್ಠರು ನನ್ನ ಜೊತೆಗೆ ಮಾತನಾಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಾದರೂ ಇಂತಹ ವ್ಯವಸ್ಥೆ ಬದಲಾಗಬೇಕಿದೆ ಎಂದರು.
ಕುಂದಗೋಳಮಠ ಅವರಿಗೂ ಸಾಕಷ್ಟು ಅನ್ಯಾಯವಾಗಿದೆ. ಆದ್ದರಿಂದ ಸ್ವಂತ ಬುದ್ಧಿಯಿಂದ ಅವರು ಪತ್ರವನ್ನು ಬರೆದಿಲ್ಲ. ಯಾರೋ ಬರೆದು ಅವರಿಗೆ ಕೊಟ್ಟಿದ್ದಾರೆ. ಅವರು ಕೂಡ ನನ್ನ ಜೊತೆಗೆ ಮಾತನಾಡಿ, ತಮಗೆ ಆಗಿರುವ ಅನ್ಯಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು. ಕಲಘಟಗಿ ವಿಧಾನಸಭಾ ಕ್ಷೇತ್ರದಿಂದ ಕುಂದಗೋಳಮಠ ಅವರಿಗೆ ಹಾಗೂ ನನಗೂ ಸಾಕಷ್ಟು ಅನ್ಯಾಯವಾಗಿದೆ. ಈ ಬಗ್ಗೆ ವರಿಷ್ಠರು ಗಮನ ಹರಿಸುವ ಮೂಲಕ ಲಿಂಗಾಯತ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಅವರು ಹೇಳಿದರು. ಬಿಜೆಪಿ ಮುಖಂಡರು ಲಿಂಗಾಯತ ನಾಯಕರನ್ನೇ ಟಾರ್ಗೆಟ್ ಮಾಡುತ್ತಿದ್ದಾರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರದೀಶ್ ಶೆಟ್ಟರ್, ಲಿಂಗಾಯತ ನಾಯಕರಿಗೆ ಆಗುತ್ತಿರುವ ಅನ್ಯಾಯದ ಕುರಿತು ಶೀಘ್ರವೇ ಬಹಿರಂಗಪಡಿಸಲಿದ್ದೇನೆ. ಇನ್ನು ಹದಿನೈದು ದಿನ ಕಾದು ನೋಡಿ. ಎಲ್ಲವೂ ಸರಿಹೋಗುತ್ತೆ ಎಂದು ಹೇಳುವ ಮೂಲಕ ಬಿಜೆಪಿಯಲ್ಲಿ ಆಂತರಿಕವಾಗಿ ಸಂಚಲನ ಮೂಡಿಸಿದ್ದಾರೆ.
ಲಿಂಗಾಯತ ನಾಯಕರ ಕಡೆಗಣನೆಗೆ ಪ್ರಮುಖ ಕಾರಣ ಯಾರು ಅನ್ನೋದನ್ನ ಸೀಕ್ರೆಟ್ ಆಗಿಟ್ಟ ಪ್ರದೀಪ್ ಶೆಟ್ಟರ್, ಹದಿನೈದು ದಿನಗಳ ನಂತರ ಪಕ್ಷದ ನಾಯಕರೇ ಇದನ್ನ ಸರಿಪಡಿಸುತ್ತಾರೆ. ಹಾಗೇನಾದರೂ ಸರಿಪಡಿಸದೇ ಹೋದಲ್ಲಿ 15 ದಿನಗಳ ನಂತರ ಕಾದು ನೋಡಿ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.