ಕರ್ನಾಟಕ

karnataka

ಮನವಿ ಸಲ್ಲಿಸಲು ಹೋದ ಯುವಕನಿಗೂ ಒಲಿದು ಬಂತು ರಾಜ್ಯ ಮಟ್ಟದ ಪ್ರಶಸ್ತಿ!

By

Published : Apr 9, 2021, 7:15 PM IST

ಗ್ರಾಮದ ಜಮೀನಿಗೆ ಸಂಪರ್ಕ‌ ಕಲ್ಪಿಸುವ ರಸ್ತೆ ನಿರ್ಮಾಣದ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಮನವಿ ಸಲ್ಲಿಸಲು ಹೋದ ಯುವಕನಿಗೆ ಮಹಾತ್ಮಗಾಂಧಿ ನರೇಗಾ ಯೋಜನೆಯ 2020-21 ನೇ ಸಾಲಿನ ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

mahatma-gandhi-narega-project-award-issues-in-hubballi
ರಾಜ್ಯ ಮಟ್ಟದ ಪ್ರಶಸ್ತಿ

ಹುಬ್ಬಳ್ಳಿ: ನಗರದಲ್ಲಿ ನಡೆದ ಮಹಾತ್ಮಗಾಂಧಿ ನರೇಗಾ ಯೋಜನೆಯ 2020-21 ನೇ ಸಾಲಿನ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಎಡವಟ್ಟು ನಡೆದಿದೆ.

ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮನವಿ ಸಲ್ಲಿಸಲು ಹೋದ ವ್ಯಕ್ತಿಯೊಬ್ಬನಿಗೂ ಪ್ರಶಸ್ತಿ ‌ನೀಡಲಾಗಿದೆ. ಇದು ಗ್ರಾಮೀಣಾಭಿವೃದ್ಧಿ ಇಲಾಖೆಯ ಎಡವಟ್ಟಿಗೆ ಹಿಡಿದ ಕೈಗನ್ನಡಿಯಾಗಿದೆ ಎಂಬ ದೂರುಗಳು ಸ್ಥಳೀಯರಿಂದ ಕೇಳಿ ಬರುತ್ತಿವೆ.

ಪ್ರಶಸ್ತಿ ಪಡೆದ ಯುವಕ ಬಸವರಾಜ್ ಯೋಗಪ್ಪನವರ್ ಮಾತನಾಡಿದ್ದಾರೆ
ಸಮಾರಂಭದಲ್ಲಿ ಎಡವಟ್ಟು ನಡೆದಿದ್ದು ಹೇಗೆ?:ಉತ್ತಮ ಸೇವೆ ಸಲ್ಲಿಸಿದ ಪಂಚಾಯಿತಿ ಪಿಡಿಒಯಿಂದ ಹಿಡಿದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದಕ್ಕಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಅಧಿಕಾರಿಗಳು ಹಾಗೂ ಪಂಚಾಯಿತಿ ಸಿಬ್ಬಂದಿ ಆಗಮಿಸಿದ್ದರು. ಈ ವೇಳೆ, ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ಬಸವರಾಜ್ ಯೋಗಪ್ಪನವರ್​ ಎಂಬ ಯುವಕ ತಮ್ಮ ಗ್ರಾಮದ ಜಮೀನಿಗೆ ಸಂಪರ್ಕ‌ ಕಲ್ಪಿಸುವ ರಸ್ತೆ ನಿರ್ಮಾಣದ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಮನವಿ ಸಲ್ಲಿಸಲು ಹೋಗಿದ್ದಾರೆ. ಆಗ ಈಶ್ವರಪ್ಪ ಅವರು ಮನವಿ‌ ಓದುತ್ತಿರುವಾಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಈತನ ಕೈಗೆ ಪ್ರಶಸ್ತಿ ‌ಫಲಕ ಕೊಟ್ಟು ಸನ್ಮಾನಿಸಿದ್ದಾರೆ.

ಅತ್ಯುತ್ತಮ ಜಿಲ್ಲಾ ಪಂಚಾಯಿತಿ‌ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬಳ್ಳಾರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿನಿ ಕೆ.ಆರ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇವರಲ್ಲದೇ, ಜಿಲ್ಲಾ ಪಂಚಾಯಿತಿ ಸಿಇಒಗಳಾದ ಚಿಕ್ಕಬಳ್ಳಾಪುರ ಫೌಜಿಯಾ ತರನುಮ್, ಪಿ.ಶಿವಶಂಕರ್, ಬೆಳಗಾವಿ ದರ್ಶನ್​ ಹೆಚ್. ವಿ ಕೊಪ್ಪಳ ರಘನಂದನ್ ಮೂರ್ತಿ, ಮೈಸೂರು ಪ್ರಶಾಂತ್ ಕುಮಾರ್ ಮಿಶ್ರ, ಹಾಗೂ ಮೈಸೂರು ಭಾರತಿ.ಡಿ ಪ್ರಶಸ್ತಿ ಪಡೆದಿದ್ದಾರೆ.

ಇಲ್ಲಿ ಮನವಿ ಕೊಡಲು ಹೋದ ಯವಕನಿಗೂ ಪ್ರಶಸ್ತಿ ನೀಡುವ ಮೂಲಕ ಸಚಿವರು ಹಾಗೂ ಆಯೋಜಕರು ಅಗೌರವ ತೋರಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ. ಈ ಬಗ್ಗೆ ಪ್ರಶಸ್ತಿ ಪಡೆದ ಯುವಕನನ್ನು ಕೇಳಿದ್ರೆ, ಮನವಿ ಕೊಡಲು ಹೋದ ನನಗೆ ಪ್ರಶಸ್ತಿ ಕೊಟ್ಟಿರುವುದು ಖುಷಿ ತಂದಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾನೆ.

ಓದಿ:ಮುಷ್ಕರದ ವೇಳೆ ಸಂಚರಿಸುತ್ತಿದ್ದ ಬಸ್ ಅಡ್ಡಗಟ್ಟಿದ​ ಯುವಕ: ಪ್ರಯಾಣಿಕರಿಂದಲೇ ಹಿಗ್ಗಾಮುಗ್ಗಾ ಥಳಿತ!

ABOUT THE AUTHOR

...view details