ಕರ್ನಾಟಕ

karnataka

ರಾಜ್ಯಾದ್ಯಂತ ಮಹಾಶಿವರಾತ್ರಿ ಸಂಭ್ರಮ: ಈಶ್ವರನ ಕೃಪೆಗೆ ಪಾತ್ರರಾದ ಸಾವಿರಾರು ಮಂದಿ

By

Published : Feb 18, 2023, 4:15 PM IST

ಧಾರವಾಡದಲ್ಲಿ ಶ್ರೀ ಸೋಮೇಶ್ವರನ ದರ್ಶನ ಪಡೆದ ಸಾವಿರಾರು ಭಕ್ತರು - ಮಂಡ್ಯದಲ್ಲಿ ಪವಿತ್ರ ಗಂಗಾಜಲ ವಿತರಣೆ - ಭಕ್ತಾದಿಗಳಿಗೆ ಲಡ್ಡು ಹಂಚಿದ ರೌಡಿಶೀಟರ್ ಸುನೀಲ್​ - ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಶಿವರಾತ್ರಿ ಸಂಭ್ರಮ

maha shivaratri
ಮಹಾಶಿವರಾತ್ರಿ

ಹುಬ್ಬಳ್ಳಿ ಧಾರವಾಡದಲ್ಲಿ ಮಹಾಶಿವರಾತ್ರಿ ಸಂಭ್ರಮ

ಧಾರವಾಡ, ಮಂಡ್ಯ, ಬೆಂಗಳೂರು, ಹುಬ್ಬಳ್ಳಿ:ಸಾಹಿತಿಗಳ ನಾಡು ಧಾರವಾಡದಲ್ಲಿ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿದೆ. ಧಾರವಾಡದ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ದೇವರ ದರ್ಶನ ಪಡೆದರು. ಬೆಳಗಿನ ಜಾವ 3 ಗಂಟೆಯಿಂದಲೇ ಶಿವಲಿಂಗಕ್ಕೆ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಲಾಯಿತು.

ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಶಾಲ್ಮಲೆಯ‌ ನದಿ ತಟದಲ್ಲಿರುವ ಸೋಮೇಶ್ವರ ದೇವಸ್ಥಾನದಲ್ಲಿ ಮಹಾಭಾರತದ ಕಾಲದಲ್ಲಿ ಅಗಸ್ತ್ಯ ಮುನಿಗಳು ಸೃಷ್ಟಿಸಿದ ಶಿವಲಿಂಗಕ್ಕೆ ಪೂಜೆ ಸಲ್ಲಿಸಲಾಯಿತು. ದಕ್ಷಿಣ ಭಾರತದ ಯಾತ್ರೆಯಲ್ಲಿದ್ದ ಅಗಸ್ತ್ಯ ಮುನಿಗಳು ಈ ಶಿವಲಿಂಗ ಸೃಷ್ಟಿಸಿದರೆಂಬ ಐತಿಹಾಸಿಕ. ಇಂದು ಮಹಾಶಿವರಾತ್ರಿ ಹಿನ್ನೆಲೆ ಭಕ್ತರಿಗೆ ಗರ್ಭಗುಡಿ ಪ್ರವೇಶಕ್ಕೆ ಅನುಮತಿ ನೀಡಲಾಗಿದ್ದು, ದೇವರಿಗೆ ಬಿಲ್ವಪತ್ರೆ, ಹೂವುಗಳನ್ನು ಅರ್ಪಿಸಿ ಭಕ್ತರು ಕೃತಾರ್ಥರಾಗುತ್ತಿದ್ದಾರೆ.

ಪವಿತ್ರ ಗಂಗಾಜಲ ವಿತರಣೆ: ಮಹಾಶಿವರಾತ್ರಿ ಹಬ್ಬದ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲಾಡಳಿತ, ಧಾರ್ಮಿಕ ‌ದತ್ತಿ ಇಲಾಖೆ ವತಿಯಿಂದ ಜಿಲ್ಲೆಯ ಎಲ್ಲಾ‌ ತಾಲೂಕಿನ ಶಿವ ದೇವಾಲಯಗಳಿಗೆ ಪವಿತ್ರ ಗಂಗಾಜಲ ವಿತರಣೆ ಮಾಡಲಾಯಿತು. ಶ್ರೀರಂಗಪಟ್ಟಣ, ಪಾಂಡವಪುರ, ಕೆ.ಆರ್ ಪೇಟೆ, ನಾಗಮಂಗಲ, ಮಳವಳ್ಳಿ, ಮಂಡ್ಯ ತಾಲೂಕುಗಳಿಗೆ ತಲಾ‌ 5 ಪವಿತ್ರ ಗಂಗಾಜಲ ಕ್ಯಾನ್​ಗಳನ್ನು ವಿತರಣೆ ಮಾಡಲಾಯಿತು.

ಗಂಗಾಜಲ ವಿತರಣೆ ಮಾಡಿ ಬಳಿಕ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗಾರಾಜು, 'ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಎಲ್ಲಾ ದೇವಾಲಯಗಳಲ್ಲಿ ಪವಿತ್ರ ಗಂಗಾಜಲದಿಂದ ಶಿವನಿಗೆ ಅಭಿಷೇಕ ಮಾಡಾಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿ ತಾಲೂಕಿಗೆ ಐದು ಗಂಗಾಜಲ ಕ್ಯಾನ್​ಗಳನ್ನು ತಹಶೀಲ್ದಾರ್ ಸಮಕ್ಷಮದಲ್ಲಿ ವಿತರಣೆ ಮಾಡಿದ್ದೇವೆ. ಗಂಗಾಜಲವನ್ನು ಶಿವನ ಭಕ್ತರಿಗೆ ಪ್ರಸಾದ ರೂಪದಲ್ಲಿ ಕೊಡಲಾಗುವುದು' ಎಂದರು. ಈ ವೇಳೆ ಉಪವಿಭಾಗಧಿಕಾರಿ ಎಸ್.ಹೆಚ್ ಕೀರ್ತನ, ತಹಶೀಲ್ದಾರ್ ಕುಞ ಅಹಮ್ಮದ್, ಧಾರ್ಮಿಕ ದತ್ತಿ ತಹಶೀಲ್ದಾರ್ ಎಂ.ಉಮಾ, ಕಾರ್ಯನಿರ್ವಾಹಕ ಅಧಿಕಾರಿ ಮಂಜೇಶ್, ರಮ್ಯಕೃಷ್ಣ ಸೇರಿದಂತೆ ಇನ್ನಿತರರು ಹಾಜರಿದ್ದರು.

ರೌಡಿಶೀಟರ್ ಸುನೀಲ್ ಕಡೆಯಿಂದ ಲಡ್ಡು ವಿತರಣೆ

ಭಕ್ತಾದಿಗಳಿಗೆ ಲಡ್ಡು ಹಂಚಿದ ರೌಡಿಶೀಟರ್ ಸುನೀಲ್​ : ರಕ್ತದಾನ ಶಿಬಿರದಲ್ಲಿ ಬಿಜೆಪಿಯ ಶಾಸಕರು, ಸಂಸದರೊಂದಿಗೆ ವೇದಿಕೆ ಹಂಚಿಕೊಂಡು ಸುದ್ದಿಯಾಗಿದ್ದ ಬೆಂಗಳೂರು ನಗರದ ಕುಖ್ಯಾತ ರೌಡಿ ಶೀಟರ್ ಸೈಲೆಂಟ್ ಸುನೀಲ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾನೆ. ಮಹಾ ಶಿವರಾತ್ರಿಯ ಹಿನ್ನೆಲೆಯಲ್ಲಿ ಚಾಮರಾಜಪೇಟೆಯ ದೇವಾಲಯಗಳಲ್ಲಿ ಭಕ್ತರಿಗೆ ಸುನೀಲನ ಕಡೆಯಿಂದ ಲಡ್ಡು ವಿತರಣೆ ಜೋರಾಗಿ ನಡೆದಿದೆ.

ರೌಡಿಶೀಟರ್ ಸುನೀಲ್ ಕಡೆಯಿಂದ ಲಡ್ಡು ವಿತರಣೆ

ಸದ್ಯಕ್ಕೆ ರೌಡಿಸಂ ಬಿಟ್ಟಿರುವುದಾಗಿ ಹೇಳುತ್ತಲೇ ಚಾಮರಾಜಪೇಟೆ ವ್ಯಾಪ್ತಿಯಲ್ಲಿ ಆ್ಯಕ್ಟಿವ್ ಆಗಿರುವ ಸೈಲೆಂಟ್ ಸುನೀಲ ಭಕ್ತರಿಗೆ ಲಡ್ಡು ಪ್ರಸಾದ ಹಂಚಲು ವ್ಯವಸ್ಥೆ ಮಾಡಿಕೊಂಡಿದ್ದು, ಲಡ್ಡು ಕವರ್‌ನ ಮೇಲೆ ಸುನೀಲನ ಫೋಟೋ ಜೊತೆ ಸಮಾಜ ಸೇವಕರು ಎಂಬ ಅಡಿಬರಹ ರಾರಾಜಿಸುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇಷ್ಟು ದಿನ ಹಳೆಯ ಪ್ರಕರಣಗಳಿಂದಾಗಿ ಪೊಲೀಸ್ ಠಾಣೆ, ಕೋರ್ಟ್ ಅಂತ ಅಲೆದಾಡುತ್ತಿದ್ದ ಸುನೀಲ, ಇದಿಗ ಸೈಲೆಂಟಾಗಿ ಸಮಾಜಮುಖಿ ಕಾರ್ಯಗಳು, ಟೆಂಪಲ್ ರನ್ ನಲ್ಲಿ ತೊಡಗಿರುವುದರಿಂದ ಚುನಾವಣಾ ಅಖಾಡಕ್ಕೆ ಧುಮುಕುವ ಅನುಮಾನ ಮತ್ತಷ್ಟು ಬಲವಾಗಿದೆ.

ಇತ್ತೀಚಿಗೆ ಚಾಮರಾಜಪೇಟೆಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ ಮೋಹನ್, ಚಿಕ್ಕಪೇಟೆ ಶಾಸಕ ಉದಯ ಗರುಡಾಚಾರ್ ಜೊತೆ ಕೇಸರಿ ಶಾಲು ಧರಿಸಿ ಸೈಲೆಂಟ್ ಸುನೀಲ ವೇದಿಕೆ ಹಂಚಿಕೊಂಡಿದ್ದ ವಿಡಿಯೋ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದಲ್ಲದೇ ಪ್ರತಿಪಕ್ಷಗಳ ಟೀಕೆಗೆ ಕಾರಣವಾಗಿತ್ತು.

ವಾಣಿಜ್ಯ ನಗರಿಯಲ್ಲಿ ಶಿವರಾತ್ರಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿದೆ. ಹುಬ್ಬಳ್ಳಿ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರೋ ಈಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶಿವನ ಮೂರ್ತಿಗೆ ವಿಶೇಷ ಪೂಜೆ, ರುಧ್ರಾಭಿಷೇಕ ಮಾಡಲಾಯಿತು. ಸರತಿ ಸಾಲಿನಲ್ಲಿ ನಿಂತು ಸಾವಿರಾರು ಭಕ್ತರು ಅಭಿಷೇಕದಲ್ಲಿ ಭಾಗಿಯಾದರು. ಬೆಳಗ್ಗೆಯಿಂದಲೇ ನಿರಂತರವಾಗಿ ರುಧ್ರಾಭಿಷೇಕ, ಹಾಲಿನ ಅಭಿಷೇಕ, ಎಳೆನೀರು ಅಭಿಷೇಕ, ಜಲಾಭಿಷೇಕ ಮಾಡಲಾಗುತ್ತಿದೆ. ಸಾಲುಗಟ್ಟಿ ನಿಂತು ಮಹಿಳೆಯರು, ಮಕ್ಕಳು ಕುಟುಂಬ ಸಮೇತವಾಗಿ ದೇವರ ದರ್ಶನ ಪಡೆಯುತ್ತಿದ್ದಾರೆ.

ಸಿದ್ಧಾರೂಢ ಮಠದಲ್ಲಿ ಕೂಡ ಶಿವರಾತ್ರಿ ಸಂಭ್ರಮ ಮನೆ ಮಾಡಿದೆ. ನಿನ್ನೆ ರಾತ್ರಿಯಿಂದಲೂ ಸಾವಿರಾರು ಭಕ್ತರು ಮಠಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಿದ್ದಾರೂಢ ಸ್ವಾಮೀಜಿ ಹಾಗೂ ಗುರುನಾಥರೂಢ ಗದ್ದುಗೆ ದರ್ಶನ ಪಡೆಯುವ ದೃಶ್ಯ ಸಾಮಾನ್ಯವಾಗಿವೆ.

ABOUT THE AUTHOR

...view details