ಧಾರವಾಡ: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಬಿಜೆಪಿ ಮನೆಯವರೆ ಮೊದಲ ಅರ್ಜಿ ಹಾಕಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಲೇವಡಿ ಮಾಡಿದರು. ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಘೋಷಣೆ ಮಾಡಿತ್ತು. ಆಗ ಬಿಜೆಪಿಯವರು ಟೀಕೆ ಟಿಪ್ಪಣಿ ಮಾಡಿದ್ದರು. ಆದರೆ ಬಿಜೆಪಿ ಮುಖಂಡರ ಮನೆಯವರೇ ಮೊದಲು ಅರ್ಜಿ ಹಾಕಿದ್ದಾರೆ. ಬಸ್‌ನಲ್ಲಿ ಹೆಚ್ಚು ಉಚಿತ ಓಡಾಡುತ್ತಿರೋದೆ ಬಿಜೆಪಿ ಮುಖಂಡರ ಮನೆಯವರು. ಅವರು ಓಡಾಡಲಿ ನಮ್ಮ ವಿರೋಧ ಇಲ್ಲ. ಅವರೂ ನಮ್ಮ ಪ್ರಜೆಗಳು ಎಂಬ ಭಾವನೆ ನಮ್ಮಲ್ಲಿದೆ. ಹೀಗಾಗಿ ಟೀಕೆ ಟಿಪ್ಪಣಿ ನಿಲ್ಲಿಸಲಿ, ನಾವು ಮಾಡುವ ಕೆಲಸ ಭೇಷ್ ಅಂತಾ ಹೇಳಲಿ. ನಾವು ನುಡಿದಂತೆ ನಡೆದಿದ್ದೇವೆ ಎಂದರು.
ವಿಪಕ್ಷದ ಅನೇಕರು ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಮಾತನಾಡಿದ ಅವರು, ಪಕ್ಷದ ಸಿದ್ಧಾಂತ ಒಪ್ಪಿ ಬರುವವರು ಬರಲಿ, ಸಿದ್ಧಾಂತಕ್ಕೆ ಬದ್ಧ ಇರುವವರಿಗೆಲ್ಲ ಸ್ವಾಗತ ಎಂದರು. ಸರ್ಕಾರಿ ಕಾಲೇಜು ಅನುಮತಿ ವಿಳಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಸರ್ಕಾರಿ ಕಾಲೇಜು ಆರಂಭಕ್ಕೆ ಸಾಕಷ್ಟು ಕೋರಿಕೆ ಬಂದಿವೆ. ಆದರೆ ನಮ್ಮ ಇಲಾಖೆಯಲ್ಲಿಯೇ ಸಾಕಷ್ಟು ಸಮಸ್ಯೆಗಳಿವೆ. ಮೊದಲು ಅವನ್ನೆಲ್ಲ ಹಂತ ಹಂತವಾಗಿ ಪರಿಹರಿಸಬೇಕಿದೆ. ಮುಂದಿನ ವರ್ಷದೊಳಗೆ ಕೆಲವು ಕಾಲೇಜುಗಳು ಆರಂಭ ಆಗಲಿವೆ. ಹಿಂದಿನ ಸರ್ಕಾರ ಜವಾಬ್ದಾರಿ ತೆಗೆದುಕೊಳ್ಳಬೇಕಿತ್ತು. ಆದರೆ ಅವರು ಪಠ್ಯದಲ್ಲಿ ಭಾವನಾತ್ಮಕ ವಿಷಯ ಸೇರಿಸಿದರು. ಚುನಾವಣೆ ಉದ್ದೇಶಕ್ಕೆ ಏನೇನೊ ಸೇರಿಸುವ ಕೆಲಸ ಮಾಡಿದರು. ಮಕ್ಕಳ ಪರವಾಗಿ ಇರುವಂತಹ ವಿದ್ಯಾಭ್ಯಾಸ ಕೊಡಬೇಕು. ಅದು ನಮ್ಮ ಇಲಾಖೆಯ ಕರ್ತವ್ಯ, ನಮ್ಮ ಇಲಾಖೆಯಲ್ಲಿ ಸಾಕಷ್ಟು ನೂನ್ಯತೆಗಳಿದ್ದು, ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಅದನ್ನು ಸರಿಪಡಿಸುತ್ತಿದ್ದೇವೆ ಎಂದು ತಿಳಿಸಿದರು.
32 ಸಾವಿರ ಶಿಕ್ಷಕರ ವರ್ಗಾವಣೆ ಸಹ ಮಾಡಲಾಗಿದ್ದು, ವರ್ಗಾವಣೆಯಿಂದ ಅನೇಕ ಹುದ್ದೆಗಳು ಖಾಲಿ ಆಗಿವೆ. ಅಲ್ಲಿ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು. ಆದರೆ ಶಾಶ್ವತವಾಗಿ ಶಿಕ್ಷಕರ ನೇಮಕ ಆಗಬೇಕಿದೆ. ಈ ಸಂಬಂಧ 10 ದಿನಗಳಲ್ಲಿ ಸಿಎಂ ಜೊತೆ ಸಭೆ ಮಾಡುತ್ತೇವೆ. ವರ್ಗಾವಣೆಯಲ್ಲಿ ಅವ್ಯವಹಾರವಾಗಿದೆ ಎಂಬ ವಿಪಕ್ಷಗಳ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರು ಸ್ವಲ್ಪ ಕಾಮನ್ ಸೆನ್ಸ್ ಇಟ್ಟುಕೊಳ್ಳಬೇಕು. ಈ ವರ್ಗಾವಣೆ ಕೌನ್ಸಿಲಿಂಗ್ ಮೂಲಕ ನಡೆಯುತ್ತದೆ. ಆದರೂ ಆರೋಪ ಮಾಡಿದ್ದಾರೆ. ಸದ್ಯ ಬಿಜೆಪಿಗೆ ಈಗ ಏನು ಉಳಿದಿದೆ. ಮೋದಿಯವರೇ ಅವರಿಗೆ ಮೊನ್ನೆ ಸರಿಯಾದ ಸ್ಥಾನ ಕೊಟ್ಟಿದ್ದಾರೆ. ಇಸ್ರೋಗೆ ಮೋದಿ ಬಂದಿದ್ದರು, ಮಣಿಪುರದಲ್ಲಿ ಜನರು ಸತ್ತರೆ ಮೋದಿ ಬೇಸರ ಮಾಡಿಕೊಳ್ಳುವುದಿಲ್ಲ. ಆದರೆ ಯಾರೋ ಸಾಧನೆ ಮಾಡಿದರೆ ಅಲ್ಲಿ ಬರ್ತಾರೆ. ಜನರ ತೆರಿಗೆ ಹಣದಲ್ಲಿ ಮಾಡಿದ ಕೆಲಸದ ಪ್ರಚಾರ ತೆಗೆದುಕೊಳ್ಳಲು ಬರ್ತಾರೆ. ಮಣಿಪುರ ಬಗ್ಗೆ ಅವರು ತುಟಿ ಬಿಚ್ಚಿ ಮಾತನಾಡಲಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಹರಿಹಾಯ್ದರು.
ಇಸ್ರೋಗೆ ತೋರಿದ ಕಾಳಜಿ ಮಣಿಪುರಕ್ಕೂ ತೋರಿಸಬೇಕಿತ್ತು. ಬಿಜೆಪಿಯವರು ನಮ್ಮ ಬಗ್ಗೆ ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ. ಅವರಿಗೆ ಮೋದಿ ಟಾಟಾ ಮಾಡಿಕೊಂಡು ಹೋಗ್ತಾರೆ. ಇವರೆಲ್ಲ ಬ್ಯಾರಿಕೇಡ್ ಹೊರಗೆ ನಿಲ್ಲುತ್ತಾರೆ. ಸದ್ಯ ಅಷ್ಟಾದರೂ ಕೊಟ್ಟಿದಾರೆ. 67 ಬಂದಿದ್ದಕ್ಕೆ ಅಲ್ಲಿ ಇಟ್ಟಿದ್ದಾರೆ. ಮುಂದೆ 37 ಬಂದರೆ ಜನರಿಂದಾಚೆ ಇಡುತ್ತಾರೆ. ಇದು ಬಿಜೆಪಿಯ ಕೆಟ್ಟ ಸಂಸ್ಕೃತಿ, ಅಲ್ಲಿ ದುಡಿದವರಿಗೆ ಬೆಲೆ ಇಲ್ಲ. ನಿರಾಸೆಯ ಮಧ್ಯೆ ಬಿಜೆಪಿಗರು ಅಂದು ಹಸನ್ಮುಖಿಯ ಪೋಸ್ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ:ಜೆಡಿಎಸ್ನ ಎಲ್ಲಾ ಶಾಸಕರು ಪಕ್ಷ ನಿಷ್ಠೆ ಉಳ್ಳವರು.. ಯಾರೂ ಪಕ್ಷ ಬಿಡಲ್ಲ: ಸಿ ಎಂ ಇಬ್ರಾಹಿಂ