ಹುಬ್ಬಳ್ಳಿ:ಮಾಧ್ಯಮದವರು ಚೆಕ್ ಬೌನ್ಸ್ ಎಂದು ಹಾಕಿದ್ದೀರಿ, ಆದರೆ ಅದು ಚೆಕ್ ಬೌನ್ಸ್ ಅಲ್ಲ. ನಾವೇ ಹಣ ಪಾವತಿಸುವುದಾಗಿ ಸೆಟ್ಲ್ಮೆಂಟ್ ಮಾಡಿಕೊಂಡಿದ್ದೇವೆ. ಅದನ್ನು ಕೋರ್ಟ್ ಕೂಡ ಮನ್ನಣೆ ಮಾಡಿದೆ. ಹಣ ಕಟ್ಟದಿದ್ದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಹೇಳಿದರೆ ತಪ್ಪಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಇದು 10 ವರ್ಷಗಳ ಹಿಂದಿನ ಪ್ರಕರಣ. ಆಗ ಕೆಲವೊಂದು ವಿಚಾರಗಳು ಇತ್ತು. ಅದನ್ನು ಈಗ ಹೇಳುವ ಅವಶ್ಯಕತೆ ಇಲ್ಲ. ಜೊತೆಗೆ ಇದು ನನ್ನ ವೈಯಕ್ತಿಕ ಅಲ್ಲ. ಅದು ಕಂಪೆನಿಗೆ ಸಂಬಂಧಿಸಿದ್ದು, ಅದರಲ್ಲಿ ನಾನೊಬ್ಬನೇ ಅಲ್ಲ, ಸುಮಾರು ಜನ ಇದ್ದಾರೆ. ಇದು ಹಳೆಯ ಪ್ರಕರಣವಾಗಿದ್ದು, ಮಾಧ್ಯಮದವರು ನೋಡಿ ಹಾಕಿ ಎಂದು ಮನವಿ ಮಾಡಿದರು.
ಈಡಿಗ ಸಮುದಾಯದ ಕುರಿತು, ಬಿ.ಕೆ. ಹರಿಪ್ರಸಾದ್ ಹಾಗೂ ಪ್ರಣವಾವನಂದ ಸ್ವಾಮೀಜಿ ಅವರ ಹೇಳಿಕೆಗಳಿಗಳಿಗೆ ನೋ ಕಾಮೆಂಟ್ ಎಂದು ಹೇಳುವ ಮೂಲಕ ಪ್ರತಿಕ್ರಿಯೆಗೆ ಬಂಗಾರಪ್ಪ ನಿರಾಕರಿಸಿದರು.
ರಾಜ್ಯದಲ್ಲಿ ಭಷ್ಟಾಚಾರಕ್ಕಾಗಿಯೇ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ ಎನ್ನುವ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರ ಹೇಳಿಕೆ ಬಗ್ಗೆ ಮಾತನಾಡಿದ ಅವರು, "ಗೋವಿಂದ ಕಾರಜೋಳ ಅವರು ಈಗ ಏನಾಗಿದ್ದಾರೆ? ಅವರು ಯಾಕೆ ಸೋತರಂತೆ? ಮೊದಲು ಅದಕ್ಕೆ ಉತ್ತರ ಕೊಡಲಿ. ಅದಕ್ಕೆ ಜನರು ಉತ್ತರ ನೀಡಿದ್ದು, ನಮಗೆ ಅಧಿಕಾರ ಕೊಟ್ಟಿದ್ದಾರೆ. ನಮ್ಮ ಕೆಲಸವನ್ನು ನಾವು ಮಾಡುತ್ತೇವೆ" ಎಂದು ಟಾಂಗ್ ನೀಡಿದರು.
ಮಕ್ಕಳಿಂದ ಶಾಲಾ ಶೌಚಾಲಯ ಕ್ಲೀನಿಂಗ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಇತ್ತೀಚೆಗೆ ಮೂರು ಕಡೆಗಳಲ್ಲಿ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದನ್ನು ತುಂಬಾ ಗಂಭೀರವಾಗಿ ಪರಿಗಣಿಸಲಾಗಿದೆ. ಇದನ್ನು ತಡೆಗಟ್ಟಲು ಹೊಸ ಕಾನೂನು ಮಾಡುತ್ತಿದ್ದೇವೆ. ಈಗಾಗಲೇ ಕರಡು ಮಾಡಲಾಗಿದ್ದು, ಎರಡು ದಿನಗಳ ಒಳಗೆ ಹೊಸ ಆದೇಶ ನೀಡಲಾಗುತ್ತದೆ. ಮಕ್ಕಳಿಂದ ಯಾರೂ ಇಂತಹ ಕೆಲಸಗಳನ್ನು ಮಾಡಿಸಬಾರದು. ಕೆಲವು ಕಡೆ ನಾವು ಪ್ರಕರಣ ಕೂಡ ದಾಖಲಿಸಿದ್ದೇವೆ" ಎಂದು ತಿಳಿಸಿದರು.
ಶಿಕ್ಷಕರ ನೇಮಕಾತಿ ವಿಚಾರ: "ಈಗಾಗಲೇ 13 ಸಾವಿರ ಶಿಕ್ಷಕರನ್ನು ತೆಗೆದುಕೊಂಡಿದ್ದೇವೆ. ಮುಂದಿನ ಬಜೆಟ್ನಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡುವಂತೆ ಬೇಡಿಕೆ ಇಟ್ಟಿದ್ದೇವೆ. ಅನುದಾನಿತ ಶಾಲೆಗಳಿಗೂ ಕೂಡ ಹೆಚ್ಚು ಶಿಕ್ಷಕರನ್ನು ತೆಗೆದುಕೊಳ್ಳಬೇಕಿದೆ. 2015ರಿಂದ ಪ್ರಕ್ರಿಯೆ ನಡೆದಿಲ್ಲ. ಹೀಗಾಗಿ ಅವರನ್ನೂ ನೇಮಕ ಮಾಡಿಕೊಳ್ಳಬೇಕಿದೆ. ಅದನ್ನು ಕೂಡ ಮುಂದಿನ ವರ್ಷದಲ್ಲಿ ಮಾಡಲಾಗುತ್ತದೆ. ನಮ್ಮ ಸರ್ಕಾರ ಆಡಳಿತಕ್ಕೆ ಬಂದ 7 ತಿಂಗಳಲ್ಲಿ 13 ಸಾವಿರ ಶಿಕ್ಷಕರನ್ನು ತೆಗೆದುಕೊಂಡಿದ್ದೇವೆ. ಇನ್ನೂ 43 ಸಾವಿರ ಶಿಕ್ಷಕರ ಕೊರತೆ ಇದೆ. ಮುಖ್ಯಮಂತ್ರಿಗಳು ಜಾಸ್ತಿ ಅನುದಾನ ಕೊಡುತ್ತೇವೆ ಎಂದು ಹೇಳಿದ್ದಾರೆ" ಎಂದರು.
ಕನ್ನಡ ಪರ ಹೋರಾಟಗಾರರ ಬಂಧನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಕಾನೂನು ಸುವ್ಯವಸ್ಥೆ ಹೆಚ್ಚು ಕಡಿಮೆ ಆದಾಗ ಹೀಗಾಗುತ್ತದೆ. ಪ್ರಕರಣವು ನ್ಯಾಯಾಲಯದಲ್ಲಿ ಇರುವುದರಿಂದ ಈ ಬಗ್ಗೆ ನಾನು ಹೆಚ್ಚು ಮಾತನಾಡುವುದು ಸರಿಯಲ್ಲ. ಅವರಿಗೂ ಗೌರವ ಕೊಡಬೇಕು. ಅವರು ಕೇಳಿದ್ದನ್ನು ಅನುಷ್ಠಾನ ಮಾಡಬೇಕು, ಅದರ ಕೊರತೆ ಇದೆ ಎಂದು ಹೇಳಿದರು.
ಇದನ್ನೂ ಓದಿ:ಚೆಕ್ಬೌನ್ಸ್: ಮಧು ಬಂಗಾರಪ್ಪ ದಂಡ ಪಾವತಿಸದಿದ್ದರೆ 6 ತಿಂಗಳು ಜೈಲು ಶಿಕ್ಷೆಗೆ ಆದೇಶ