ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ, ದಿವಂಗತ ಎಸ್.ಆರ್. ಬಂಗಾರಪ್ಪ ಅವರ ಪುತ್ರ, ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಇಂದು ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಕಾಂಗ್ರೆಸ್ ಸೇರಿದ ಮಧು ಬಂಗಾರಪ್ಪ ಹುಬ್ಬಳ್ಳಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪಕ್ಷದ ಧ್ವಜ ನೀಡುವ ಮೂಲಕ ಮಧು ಬಂಗಾರಪ್ಪ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡರು.
ಈ ಬಳಿಕ ಮಾತನಾಡಿದ ಮಧು ಬಂಗಾರಪ್ಪ, "ಕಾಂಗ್ರೆಸ್ ಪಕ್ಷಕ್ಕೆ ಸೇರಬೇಕೆಂಬ ಆಸೆ ಮೊದಲಿನಿಂದಲೂ ಇತ್ತು. ಇದೀಗ ಆ ದಿನ ಬಂದಿದೆ. ತಂದೆ ದಿ.ಎಸ್.ಬಂಗಾರಪ್ಪ ಅವರ ಆರ್ಶೀವಾದದಿಂದ ನಾನು ಬೆಳೆದು ಬಂದವನು. ಈ ಹಿನ್ನೆಲೆಯಲ್ಲಿ ಒಂದು ಆಶ್ರಯದಲ್ಲಿ ಇರಬೇಕು, ಶಿಸ್ತಿನ ಪಕ್ಷದಲ್ಲಿ ಇರಬೇಕು ಎನ್ನುವ ಕಾರಣಕ್ಕೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ. ನಾನು ತೆಗೆದುಕೊಂಡ ಸ್ವಂತ ನಿರ್ಧಾರ ಎಂದರೆ ಅದು ಕಾಂಗ್ರೆಸ್ ಪಕ್ಷ ಸೇರ್ಪಡೆ " ಎಂದು ಹೇಳಿದರು.
"ರಾಜ್ಯದಲ್ಲಿ ಜನರ ಸಮಸ್ಯೆಗೆ ಸ್ಪಂದಿಸುವ ಪಕ್ಷ ಅದು ಕಾಂಗ್ರೆಸ್. ನನ್ನ ಉದ್ದೇಶ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕೆಂಬುದು. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಅಲ್ಲದೇ ಸಾಕಷ್ಟು ಜನರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವರು. ನಾನು ಕಾಂಗ್ರೆಸ್ನಿಂದಲೇ ಸೊರಬ ಕ್ಷೇತ್ರದಿಂದಲೇ ಸ್ಪರ್ಧಿಸುವೆ" ಎಂದರು.
ಎಐಸಿಸಿ ಕಾರ್ಯದರ್ಶಿ ಮಧು ಯಾಕ್ಷಿಗೌಡ, ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮದ್, ಹಿರಿಯ ನಾಯಕರಾದ ಕೆ.ಎಚ್. ಮುನಿಯಪ್ಪ, ಎಚ್.ಕೆ. ಪಾಟೀಲ್, ಅಲ್ಲಂ ವೀರಭದ್ರಪ್ಪ, ಶಾಸಕ ಪ್ರಸಾದ್ ಅಬ್ಬಯ್ಯ ಹಾಗೂ ಮಧು ಬಂಗಾರಪ್ಪ ಅವರ ಸಾವಿರಾರು ಬೆಂಬಲಿಗರು ಹಾಜರಿದ್ದರು.