ಧಾರವಾಡ: ಪ್ರೀತಿಗೆ ವಿರೋಧ ವ್ಯಕ್ತವಾದ ಹಿನ್ನೆಲೆ ಪ್ರೇಮಿಗಳಿಬ್ಬರು ನಿರ್ಮಾಣ ಹಂತದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಬುಧವಾರ ನಡೆದಿದೆ. ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಇಬ್ಬರು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬಾಲಕಿ ಮನೆಯವರಿಂದ ಪ್ರೀತಿಗೆ ವಿರೋಧ : ಅದೇ ಗ್ರಾಮದ 22 ವರ್ಷದ ಯುವಕ ಹಾಗೂ 16 ವರ್ಷದ ಅಪ್ರಾಪ್ತೆ ಆತ್ಮಹತ್ಯೆಗೆ ಶರಣಾದವರು. ಇವರಿಬ್ಬರ ಮಧ್ಯೆ ಕಳೆದ ಹಲವಾರು ವರ್ಷದಿಂದ ಪ್ರೇಮ ಏರ್ಪಟ್ಟಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ಈ ಇಬ್ಬರೂ ನಾಪತ್ತೆ ಕೂಡ ಆಗಿದ್ದರು.
ನಿರ್ಮಾಣ ಹಂತದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು: ಹುಡುಗಿಯ ತಂದೆ ತಾಯಿ ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದರು. ಆದರೆ ಇಬ್ಬರು ಪ್ರೇಮಿಗಳು ಆ ಯುವಕನ ನಿರ್ಮಾಣ ಹಂತದ ಮನೆಯಲ್ಲಿ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಬ್ಬರು ಪ್ರೀತಿಸುತ್ತಿದ್ದ ವಿಷಯ ಎರಡು ಮನೆಯಲ್ಲಿಯೂ ತಿಳಿದಿತ್ತು.
ಮೃತದೇಹಗಳನ್ನು ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗೆ ರವಾನೆ:ಜೋಡಿ ಮಂಗಳವಾರ ರಾತ್ರಿ ನಾಪತ್ತೆಯಾಗಿದ್ದರು. ಬುಧವಾರ ನಿರ್ಮಾಣ ಹಂತದ ಕಟ್ಟಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನನ್ನ ಮಗಳು ಹಾಗೂ ಯುವಕ ಇಬ್ಬರು ಪ್ರೀತಿಸುತ್ತಿದ್ದರು. ನಂತರ ಇಬ್ಬರು ಮಾನಸಿಕವಾಗಿ ನೊಂದು ನಿರ್ಮಾಣ ಹಂತದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳ ಹಾಗೂ ಯುವಕನ ಸಾವಿನಲ್ಲಿ ನಮಗೆ ಯಾವುದೇ ಸಂಶಯವಿರುವುದಿಲ್ಲ ಎಂದು ಮೃತಳ ತಾಯಿ ಅವರು ನೀಡಿರುವ ವರದಿಯನ್ನು ಸ್ವೀಕರಿಸಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.