ಹುಬ್ಬಳ್ಳಿ:ಸಿಮೆಂಟ್, ಕಬ್ಬಿಣ, ಕೂಲಿ ಕಾರ್ಮಿಕರ ವೇತನ ಹೆಚ್ಚಳದ ಬಿಸಿಯಿಂದ ರಿಯಲ್ ಎಸ್ಟೆಟ್ ಉದ್ಯಮ ತತ್ತರಿಸುತ್ತಿದ್ದು, ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ನೆತ್ತಿ ಮೇಲೊಂದು ಸೂರು ಕಟ್ಟಿಕೊಳ್ಳಲು ಹೊರಟ ಮಧ್ಯಮ - ಬಡ ವರ್ಗದ ಜನರು, ನೌಕರರು ಒದ್ದಾಡುತ್ತಿದ್ದಾರೆ.
ಕೊರೊನಾ ಕಾಟ: ಮೇಲೇಳುತ್ತಿಲ್ಲ ಅರ್ಧಕ್ಕೆ ನಿಂತ ಮನೆಗಳು
ಲಾಕ್‌ಡೌನ್ ನೀಡಿದ ಅತಿದೊಡ್ಡ ಪೆಟ್ಟಿನಿಂದ ಕಾರ್ಮಿಕರು ಮತ್ತು ಸಿಮೆಂಟ್ ಕೊರತೆಯಿಂದ ರಿಯಲ್ ಎಸ್ಟೇಟ್ ಉದ್ಯಮ ಸಂಪೂರ್ಣ ನೆಲಕಚ್ಚಿದೆ. ಈ ಮೂಲಕ ಮನೆ ಕಟ್ಟುವ ಕನಸು ಇನ್ನು ದುಬಾರಿ ಎಂಬುದು ತಿಳಿಯುತ್ತದೆ.
ಲಾಕ್‌ಡೌನ್‌ಗೂ ಮುನ್ನ ಎಲ್ಲ ಕಂಪನಿಗಳ ಎ ಗ್ರೇಡ್ ಸಿಮೆಂಟ್ ಬೆಲೆ ₹280 - 300 (ಚೀಲಕ್ಕೆ) ಬೆಲೆಯಿತ್ತು. ನಂತರ ಇದೇ ಸಿಮೆಂಟ್ ₹400 - 420ಕ್ಕೆ ಏರಿದೆ. ₹240-250 ಇದ್ದ ಬಿ ಮತ್ತು ಸಿ ಗ್ರೇಡ್ ಸಿಮೆಂಟ್ ಬೆಲೆ ಈಗ ₹ 360-380ಕ್ಕೆ ಹೆಚ್ಚಳ ಕಂಡಿದೆ. ಇತ್ತ ಕಬ್ಬಿಣದ ಬೆಲೆಯೂ ಗಗನಕ್ಕೇರಿದೆ. ಲಾಕ್‌ಡೌನ್‌ಗೂ ಮುನ್ನ ಎಲ್ಲ ಕಂಪನಿಗಳ ಕಬ್ಬಿಣ ₹46-62 ಇದ್ದ ಬೆಲೆ 48-64 ಆಗಿದೆ. ಪ್ರತಿ ಟನ್‌ಗೆ ₹2,500-3,000 ಏರಿದೆ.
ಲಾಕ್‌ಡೌನ್ ಸಡಿಲಿಕೆ ಬಳಿಕ ಉತ್ಪಾದನೆ ಆರಂಭವಾಗಿದ್ದರೂ ಕಚ್ಚಾ ವಸ್ತುಗಳು, ಸಾರಿಗೆ, ಕಾರ್ಮಿಕರ ಕೊರತೆ ತಲೆದೋರಿದೆ. ಕಟ್ಟಡ ಕಾಮಗಾರಿ ಮೂಲ ಬೆಲೆ ಏರಿಕೆ ಒಂದೆಡೆಯಾದರೆ ಇನ್ನೊಂದೆಡೆ ಕಟ್ಟಿದ ಮನೆಗಳ ಖರೀದಿಗೆ ಯಾರೂ ಮುಂದೆ ಬರುತ್ತಿಲ್ಲ. ಸದ್ಯ ಕೊರೊನಾಗೂ ಮುನ್ನ ಅರ್ಧಕ್ಕೆ ನಿಂತ ಎಷ್ಟೋ ಮನೆಗಳು ಈಗ ಮೇಲೇಳಲು ಒದ್ದಾಡುತ್ತಿವೆ.