ಧಾರವಾಡ: ಲಾಕ್‍ಡೌನ್ ನಿಯಮ ಸಡಿಲಿಕೆಯಾಗಿದ್ದು, ಕಂಟೈನ್‍ಮೆಂಟ್ ಪ್ರದೇಶ ಹೊರತುಪಡಿಸಿ ಜಿಲ್ಲೆಯ ಎಲ್ಲಾ ಕಡೆ ರಸ್ತೆ, ಕಟ್ಟಡ ನಿರ್ಮಾಣ ಕಾಮಗಾರಿಗಳು ಹಾಗೂ ಜಲ್ಲಿ ಕಲ್ಲು, ಕ್ರಷರ್ ಘಟಕಗಳ ಕಾರ್ಯಾರಂಭಕ್ಕೆ ಅವಕಾಶ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಜಿಲ್ಲೆಯಲ್ಲಿ ಹಲವು ಕಾಮಗಾರಿ ಪುನಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸೂಚನೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೊರೊನಾ ನಿಯಂತ್ರಣದ ಲಾಕ್‍ಡೌನ್-2ರ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಕೈಗಾರಿಕೆಗಳನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಆರಂಭಿಸಬಹುದು. ಈ ಚಟುವಟಿಕೆಗಳಿಗೆ ಜಿಲ್ಲಾಡಳಿತ ಆನ್‍ಲೈನ್ ಮೂಲಕ ಸರಳವಾಗಿ ಅನುಮತಿ ನೀಡಲಿದೆ ಎಂದರು.
ಜಿಲ್ಲೆಯಲ್ಲಿ ಹಲವು ಕಾಮಗಾರಿ ಪುನಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆಗಳು ಸೇರಿದಂತೆ ಎಲ್ಲಾ ಇಲಾಖೆಗಳು ಹಾಗೂ ಅರೆ ಸರ್ಕಾರಿ ಸಂಸ್ಥೆಗಳು ಆನ್‍ಲೈನ್ ಮೂಲಕ ಕಾಮಗಾರಿಯ ವಿವರಗಳನ್ನು ಸಲ್ಲಿಸಿ ಜಿಲ್ಲಾಡಳಿತದ ಅನುಮತಿ ಪಡೆಯಬೇಕು. ಬೇರೆ ಜಿಲ್ಲೆಗಳಿಂದ ಕಾರ್ಮಿಕರನ್ನು ಒಂದು ಬಾರಿ ಕರೆ ತರಬೇಕು. ಕಾಮಗಾರಿ ಸ್ಥಳದಲ್ಲಿ ಅವರಿಗೆ ಊಟ, ವಸತಿ ಸೌಲಭ್ಯಗಳ ಕ್ಯಾಂಪ್ ಮಾಡುಸುವಂತೆ ಗುತ್ತಿಗೆದಾರರಿಗೆ ತಿಳಿಸಬೇಕು ಎಂದರು.
ಇನ್ನು ಹುಬ್ಬಳ್ಳಿ-ಧಾರವಾಡ ಹೊರವಲಯದ ಗಬ್ಬೂರ ಕ್ರಾಸ್, ಬೈಪಾಸ್ ರಸ್ತೆಗಳ ಕಾಮಗಾರಿಗಳನ್ನು ಕೈಗೊಳ್ಳಬೇಕು. ರಸ್ತೆ ಮತ್ತು ಕಟ್ಟಡ ಕಾಮಗಾರಿಗಳನ್ನು ಕೈಗೊಳ್ಳಲು ಕಬ್ಬಿಣ, ಸಿಮೆಂಟ್, ಉಸುಕು ಸಾಗಾಣೆಗೆ ಪೊಲೀಸರು ಅಡ್ಡಿಪಡಿಸಬಾರದು. ಹಾಲು, ಮಾಂಸ ಮಾರಾಟಗಾರರು ಪಾಸ್ ಹೊಂದಿದ್ದರೂ ಕೂಡಾ ತಡೆದ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿವೆ. ಸರ್ಕಾರಿ ಸೇವೆಯಲ್ಲಿರುವ ನೌಕರರು ಹಾಗೂ ಮಾಧ್ಯಮದವರನ್ನು ಕೂಡಾ ಅವರ ಗುರುತಿನ ಚೀಟಿ ಪರಿಶೀಲಿಸಿ ಕರ್ತವ್ಯಕ್ಕೆ ಅನುವು ಮಾಡಿಕೊಡಬೇಕು ಎಂದು ಸೂಚಿಸಿದರು.
ಹಲ್ಲೆ ಸಂಬಂಧಿತ ಘಟನೆಗಳು ಪುನರಾವರ್ತನೆಯಾಗಬಾರದು. ಸರ್ಕಾರದ ಕಂದಾಯ, ಪೊಲೀಸ್, ಆರೋಗ್ಯ, ಮಹಾನಗರ ಪಾಲಿಕೆ ಸೇರಿದಂತೆ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕಿದೆ. ಹತ್ತಿ ಖರೀದಿಯನ್ನು ಭಾರತೀಯ ಹತ್ತಿ ನಿಗಮವು ತನ್ನ ನಿಯಮಾನುಸಾರ ಕೂಡಲೇ ಪ್ರಾರಂಭಿಸಿ, ರೈತರಿಗೆ ಮಾಹಿತಿ ನೀಡಬೇಕು ಎಂದರು.
ರಂಜಾನ್ ಮಾಸಕ್ಕೆ ಒತ್ತು: ಪವಿತ್ರ ರಂಜಾನ್ ಮಾಸ ಪ್ರಾರಂಭವಾಗುವುದರಿಂದ ಮನೆಗಳ ಬಳಿಯೇ ಹಣ್ಣು, ಮಾಂಸ ಸೇರಿದಂತೆ ಅಗತ್ಯ ಉತ್ಪನ್ನಗಳು ಮತ್ತು ವಸ್ತುಗಳು ಪೂರೈಕೆಯಾಗುವಂತೆ ವ್ಯವಸ್ಥೆ ಮಾಡಬೇಕು. ಮಸೀದಿಗಳಲ್ಲಿ ಧರ್ಮಗುರುಗಳನ್ನು ಹೊರತುಪಡಿಸಿ, ಹೆಚ್ಚು ಜನ ಸೇರಿ ಸಾಮೂಹಿಕ ಪ್ರಾರ್ಥನೆ ಮಾಡಬಾರದು ಎಂದರು.
ಆಯಾ ಮಸೀದಿಗಳ ಜಮಾತ್ ಸಮಿತಿಯವರು ತಮ್ಮ ಸದಸ್ಯರಿಗೆ ತಿಳುವಳಿಕೆ ನೀಡಿ, ಮನೆಗಳಲ್ಲಿಯೇ ಪ್ರಾರ್ಥನೆ ಮಾಡಲು ಜಾಗೃತಿ ಮೂಡಿಸಬೇಕು ಎಂದರು.
ಕೊರೊನಾ ಪರೀಕ್ಷೆ ತ್ವರಿತ: ಕೋವಿಡ್-19 ತ್ವರಿತ ತಪಾಸಣೆಗಾಗಿ ಹುಬ್ಬಳ್ಳಿಯ ಕಿಮ್ಸ್ ಹಾಗೂ ಧಾರವಾಡದ ಡಿಮ್ಹಾನ್ಸ್ ಮತ್ತು ನೆರೆಯ ಬೆಳಗಾವಿ ಹಾಗೂ ಗದಗ ಜಿಲ್ಲೆಗಳಲ್ಲಿಯೂ ತಪಾಸಣಾ ಪ್ರಯೋಗಾಲಯಗಳು ಪ್ರಾರಂಭವಾಗುವುದರಿಂದ ಪರೀಕ್ಷಾ ಫಲಿತಾಂಶ ತ್ವರಿತವಾಗಿ ಲಭ್ಯವಾಗಲಿವೆ ಎಂದರು.
ಕಿಮ್ಸ್, ರೈಲ್ವೆ ಆಸ್ಪತ್ರೆ, ಡಿಮ್ಹಾನ್ಸ್, ಎಸ್‍ಡಿಎಂ ಸೇರಿದಂತೆ ಎಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್-19 ಚಿಕಿತ್ಸೆ ಮತ್ತು ಪರೀಕ್ಷೆಗೆ ಅಗತ್ಯವಾದ ಆರೋಗ್ಯ ರಕ್ಷಣಾ ಸಾಮಾಗ್ರಿಗಳ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.