ಧಾರವಾಡ:ಕಳೆದ ವರ್ಷ ನಡೆದ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಮುಗಿದು ಹೋದಂತಾಗಿದೆ. ಈ ಹೋರಾಟಕ್ಕೆ ಸಂಬಂಧಿಸಿದಂತೆ ಅನೇಕ ರಾಜಕೀಯ ಸ್ಥಿತ್ಯಂತರಗಳು ನಡೆದು, ಕೊನೆಗೆ ಇದಕ್ಕೆ ಸಹಕಾರ ನೀಡಿದ್ದ ರಾಜಕೀಯ ಮುಖಂಡರೇ ಸಾಕು ಸಾಕಪ್ಪಾ ಎಂದು ಈ ಹೋರಾಟದಿಂದ ಹಿಂದೆ ಸರಿದರು.ಅದರಲ್ಲಿ ಕೆಲವರು ಬಹಿರಂಗವಾಗಿ ನಾವು ಇದರಲ್ಲಿ ತಲೆ ಹಾಕಿದ್ದು ತಪ್ಪು ಅಂತಾನೂ ಹೇಳಿಕೊಂಡಿದ್ದರು. ಆದರೆ, ಅದರ ನಾಯಕತ್ವ ವಹಿಸಿಕೊಂಡಿದ್ದ ವಿನಯ ಕುಲಕರ್ಣಿ ಮಾತ್ರ ಆ ಬಗ್ಗೆ ಯಾವುದೇ ಮಾತೇ ಆಡಿರಲಿಲ್ಲ. ಇದೀಗ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಅವರ ಹೋರಾಟಕ್ಕೆ ತಿಲಾಂಜಲಿ ಇಟ್ಟಿದ್ದಾರೆ ಎಂಬ ವಾತಾವರಣಕ್ಕೆ ಸಾಕ್ಷಿಯಾಗಿದ್ದಾರೆ.
ಕಳೆದ ವರ್ಷ ಲಿಂಗಾಯತ ಪ್ರತ್ಯೇಕ ಹೋರಾಟದ ಮಾತು ಮುಗಿಲೆತ್ತರಕ್ಕೆ ಮುಟ್ಟಿತ್ತು. ರಾಜ್ಯದ ಅನೇಕ ಕಡೆಗಳಲ್ಲಿ ಲಕ್ಷಾಂತರ ಅನುಯಾಯಿಗಳೊಡನೆ ಲಿಂಗಾಯತ ಶ್ರೀಗಳು, ನಾಯಕರು ಹೋರಾಟ ಮಾಡಿ, ನಾನೂ ಲಿಂಗಾಯತ ಎಂದು ಅವರಿವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅದರ ಹಿಂದೆ ಸಿದ್ದರಾಮಯ್ಯ ಅವರ ರಾಜಕೀಯ ಲೆಕ್ಕಾಚಾರವೂ ಇತ್ತು. ಆದರೆ, ಈ ಹೋರಾಟ ಆಗ ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತು ಅಂತಾ ಹೇಳಲಾಗಿತ್ತು. ಆದರೆ, ಅದ್ಯಾವುದೂ ನಡೆಯದೇ ಈ ಹೋರಾಟದಲ್ಲಿ ಪಾಲ್ಗೊಂಡಿದ್ದ ಅನೇಕ ಕೈ ನಾಯಕರು ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತು ಹೋಗಿದ್ದು ಇದೀಗ ಇತಿಹಾಸ.
ಅಲ್ಲದೇ ಕಾಂಗ್ರೆಸ್ ಪಾಲಿಗೆ ಈ ಹೋರಾಟ ಭಾರೀ ಹಿನ್ನೆಡೆ ತಂದಿದ್ದಲ್ಲದೇ ಅದನ್ನು ಬಹಿರಂಗವಾಗಿ ಡಿಕೆಶಿ ಅಂಥವರೇ ಒಪ್ಪಿಕೊಂಡಿದ್ದರು. ಆದರೆ, ಈ ವೇಳೆ ರಾಷ್ಟ್ರೀಯ ಬಸವ ಸೇನೆ ಎಂಬ ಸಂಘಟನೆ ಹುಟ್ಟು ಹಾಕಿ, ಅದರ ಅಧ್ಯಕ್ಷರಾಗಿದ್ದ ವಿನಯ ಕುಲಕರ್ಣಿ ಮಾತ್ರ ಹೋರಾಟ ಮುಗಿದಿಲ್ಲ ಅಂತಾ ಹೇಳುತ್ತಲೇ ಬಂದಿದ್ದರು. ಆದರೆ, ಇದೀಗ ಅವರೂ ಸಹ ಈ ಹೋರಾಟವನ್ನು ಬಹುತೇಕ ಕೈಬಿಟ್ಟಿದ್ದಾರೆ ಅನ್ನಿಸುತ್ತೆ. ಧಾರವಾಡ ಲೋಕಸಭಾ ಚುನಾವಣೆಯ ಮೈತ್ರಿ ಅಭ್ಯರ್ಥಿಯಾಗಿರೋ ವಿನಯ ಕುಲಕರ್ಣಿ, ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು, ವೀರಸೋಮೇಶ್ವರ ಶಿವಾಚಾರ್ಯರನ್ನು ಭೇಟಿಯಾಗೋ ಮೂಲಕ ಈ ಹೋರಾಟಕ್ಕೆ ತಿಲಾಂಜಲಿ ಇಟ್ಟಿದ್ದಾರೆ.