ಹುಬ್ಬಳ್ಳಿ:ಕಲಘಟಗಿ ತಾಲೂಕಿನ ಹೊನ್ನಳ್ಳಿಯಲ್ಲಿ ಸೈನಿಕನೊಬ್ಬ ಹತ್ಯೆಗೆ ಸಂಬಂಧಿಸಿದ ಅಪರಾಧ ಸಾಬೀತಾದ ಹಿನ್ನೆಲೆ ಧಾರವಾಡ ಹೈಕೋರ್ಟ್ ಏಳು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 34 ಸಾವಿರ ರೂ. ದಂಡ ವಿಧಿಸಿ, ತೀರ್ಪು ನೀಡಿದೆ. ಸೈನಿಕ ನಿಂಗಪ್ಪ ಯಲಿವಾಳ ಎಂಬುವವರನ್ನು 2015ರ ಸೆ.20ರಂದು ಬಸವರಾಜ ಯಲಿವಾಳ ಹಾಗೂ ಇತರ ಆರು ಜನರು ಕೊಲೆ ಮಾಡಿದ್ದರು. ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮೃತ ನಿಂಗಪ್ಪ ಯಲಿವಾಳ ಹಾಗೂ ಆರೋಪಿಗಳ ಮಧ್ಯೆ ಆಸ್ತಿ ಕುರಿತು ವ್ಯಾಜ್ಯವಿತ್ತು. ಜಿಲ್ಲಾ ನ್ಯಾಯಾಲಯವು 2019ರ ಏ.18ರಂದು ಎಲ್ಲ ಆರೋಪಿಗಳನ್ನು ಬಿಡುಗಡೆಗೊಳಿಸಿತ್ತು. ಸತ್ರ ನ್ಯಾಯಾಲಯದ ಆದೇಶ ರದ್ದುಗೊಳಿಸಿದ ಧಾರವಾಡ ಹೈಕೋರ್ಟ್, ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ. ಹಾಗೆ ದಂಡದ ಹಣದಲ್ಲಿ ಮೃತರ ತಂದೆ, ತಾಯಿಗೆ ತಲಾ ಒಂದು ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿದೆ. ಫಿರ್ಯಾದಿ ಮೃತನ ತಂದೆ ಪರವಾಗಿ ಹಿರಿಯ ನ್ಯಾಯವಾದಿ ಎಲ್.ಎಸ್. ಸುಳ್ಳದ ವಾದ ಮಂಡಿಸಿದ್ದರು.
ಮಗಳ ಕೊಂದ ತಂದೆಗೆ ಜೀವಾವಧಿ ಶಿಕ್ಷೆ:ಚಿಕ್ಕೋಡಿಯ ಪ್ರಕರಣವೊಂದರಲ್ಲಿ ಹೆತ್ತ ಮಗಳನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದ ತಂದೆಗೆ 10 ಸಾವಿರ ದಂಡ ಸಹಿತ ಜೀವಾವಧಿ ಶಿಕ್ಷೆ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿತ್ತು. ಬೆಳಗಾವಿಯ ಅಥಣಿ ತಾಲೂಕಿನ ಮಂಗಸೂಳಿ ಮಲ್ಲಾರವಾಡಿ ಗ್ರಾಮದ ಬಸವರಾಜ ಮಗದುಮ್ಮಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
2016ರಲ್ಲಿ ಆರೋಪಿ ಬಸವರಾಜ ತನ್ನ ಮಗಳಾದ ಸಂಗೀತಾ(7)ಳನ್ನು ಶೆಡ್ವೊಂದರಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದ. ಹೆತ್ತ ಮಗಳನ್ನು ಸಾಕಲು ಆಗಲ್ಲ ಎಂದು ಬಾಲಕಿಯನ್ನು ಕೊಲೆ ಮಾಡಿದ್ದನು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.