ಧಾರವಾಡ: ರಾಜ್ಯದ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲ ತಿಂಗಳುಗಳಷ್ಟೇ ಬಾಕಿ ಇದೆ. ಹೀಗಿರುವಾಗ ಧಾರವಾಡದಲ್ಲಿ ರಾಜಕೀಯ ನಾಯಕರುಗಳು, ಪಕ್ಷಗಳ ಕಾರ್ಯಕರ್ತರು ಪತ್ರ ರಾಜಕೀಯ ಶುರು ಮಾಡಿದ್ದಾರೆ. ವಸತಿ, ಮನೆ ಹೆಸರಿನಲ್ಲಿ ಪತ್ರಗಳ ಮತಗಳ ಓಲೈಕೆ ಶುರು ಮಾಡಿದ್ದಾರೆ. ಹಾಲಿ ಶಾಸಕರೊಬ್ಬರು ವಸತಿ ಮನೆ ಕೊಡಿಸ್ತೇವೆ ಮತ್ತೊಮ್ಮೆ ನನಗೆ ಆಶೀರ್ವದಿಸಿ ಎಂದು ಪತ್ರ ಬರೆದಿದ್ದಾರೆ ಎಂದು ಎಐಸಿಸಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೂರೆ ಆರೋಪಿಸಿದ್ದಾರೆ.
ಪ್ರತಿ ಸಲ ಐದು ವರ್ಷಕ್ಕೊಂದು ಬಾರಿ ಹಕ್ಕುಪತ್ರ ಹಂಚುವ ರೋಗ ಬರುತ್ತದೆ. ಬಿಜೆಪಿಯವರಿಗೆ ಈಗಾಗಲೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಬಹುಮತ ಗಳಿಸುವುದಿಲ್ಲ ಎನ್ನುವ ಭಯ ಪ್ರಾರಂಭವಾಗಿದೆ. ವಾಜಪೇಯಿ ನಗರ, ರಾಮಲಿಂಗನಗರದಲ್ಲಿ ಹಕ್ಕುಪತ್ರ ಹಂಚುವ ಕೆಲಸ ಮಾಡುತ್ತಿದ್ದಾರೆ. ಪ್ರಧಾನಮಂತ್ರಿ ಆವಾಸ್ ವಸತಿ ಯೋಜನೆಯಡಿ ಮನೆ ಜಾರಿ ಆಗಿದೆ. ಬಂದು ಪಡೆದುಕೊಳ್ಳಿ ಎಂದು ಬೆಲ್ಲದ ಅವರು ಪತ್ರ ಹಾಕುತ್ತಾರೆ. ಅವರು ಆ ಪತ್ರ ಹಿಡಿದುಕೊಂಡು ಬೆಲ್ಲದ್ ಮನೆಗೆ ಹೋಗಬೇಕು. ಅಲ್ಲೊಂದು ಪತ್ರ ಕೊಡುತ್ತಾರೆ ಅದನ್ನು ತೆಗೆದುಕೊಂಡು ಕಾರ್ಪೋರೇಷನ್ಗೆ ಹೋಗಬೇಕು. ಅಲ್ಲಿನ ಸಿಬ್ಬಂದಿ ಅವರ ಏಜೆಂಟ್ಗಳ ರೀತಿ ಕೆಲಸ ಮಾಡುತ್ತಾರೆ ಎಂದು ದೂರಿದ್ದಾರೆ.
ಶಾಸಕ ಅರವಿಂದ ಬೆಲ್ಲದ ಪತ್ರ ಬರೆದು ಆಮಿಷ ತೋರುತ್ತಿದ್ದಾರೆ ಎಂದು ದೀಪಕ್ ಚಿಂಚೂರೆ ಹರಿಹಾಯ್ದಿದ್ದಾರೆ. ಶಾಸಕ ಅರವಿಂದ ಬೆಲ್ಲದ ಅವರ ಲೆಟರ್ ಹೆಡ್ ಹಾಗೂ ಸಹಿ ಇರುವ ಪತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ಫಲಾನುಭವಿ ಆಯ್ಕೆ ಎನ್ನುವ ಪತ್ರವಿದೆ. ಈಗಾಗಲೇ ಹಂಚಿಕೆಯಾಗಿರುವ ಮನೆಗಳನ್ನು ಫಲಾನುಭವಿಗಳಿಗೆ ಕೊಡದೇ ಬೇರೆಯವರಿಗೆ ಈ ರೀತಿ ಪತ್ರ ಬರೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.