ಹುಬ್ಬಳ್ಳಿ: ಸರ್ಕಾರ ನೆರೆ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದೆ, ಸರಿಯಾದ ಮಾಹಿತಿಯನ್ನು ಜನರಿಗೆ ತಿಳಿಸಬೇಕು. ಅದನ್ನು ಬಿಟ್ಟು ಕೆಲವರು ಸರ್ಕಾರದಲ್ಲಿ ಹಣವಿದೆ ಎಂದರೆ ಇನ್ನು ಕೆಲವರು ಖಜಾನೆ ಖಾಲಿ ಆಗಿದೆ ಎನ್ನುತ್ತಾರೆ. ಕೂಡಲೇ ಈ ಬಗ್ಗೆ ಸ್ಪಷ್ಟನೆ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ದೊಡ್ಡ ಮಟ್ಟದ ಪ್ರವಾಹ ಉಂಟಾಗಿ ಅಪಾರ ಪ್ರಮಾಣದ ಬೆಳೆಹಾನಿ, ಮನೆ ಹಾನಿ ಆಗಿವೆ. ಇದರಿಂದಾಗಿ ದೊಡ್ಡ ಮಟ್ಟದ ನಿರಾಶ್ರಿತರ ಸಂಖ್ಯೆ ಇದೆ. ಈ ಸಮಯದಲ್ಲಿ ಸರ್ಕಾರದ ವಿರುದ್ಧ ಟೀಕೆ ಮಾಡುವುದರ ಬದಲು ಅವರಿಗೆ ಕೆಲ ಸಮಯ ನೀಡಬೇಕು ಎಂದರು.
ಹೆಚ್.ಡಿ.ಕುಮಾರಸ್ವಾಮಿ ಸುದ್ಧಿಗೋಷ್ಠಿ ಡಿ.5 ರಂದು ಉಪಚುನಾವಣೆ ಎಂದು ಮಾಹಿತಿ ಬಂದಿದೆ. ಆ ಸಮಯದಲ್ಲಿ ಯಾರೇ ಗೆದ್ದು, ಸರ್ಕಾರ ಯಾವುದೇ ಬಂದರೂ, ಮುಖ್ಯಮಂತ್ರಿ ಯಾರೇ ಆದರೂ ಮನೆ ಕಳೆದುಕೊಂಡವರಿಗೆ ಸೂರು ಕಲ್ಪಿಸುವ ಕೆಲಸ ಮಾಡಬೇಕು. ಅಂತವರಿಗೆ ನನ್ನ ಸಂಪೂರ್ಣ ಬೆಂಬಲ ಕೊಡುತ್ತೇನೆ ಎಂದಿದ್ದಾರೆ. ನಾನು ಯಾವುದೇ ಕೇಸ್ ನಲ್ಲಿ ಸಿಲುಕಿಕೊಳ್ಳುತ್ತೇನೆ ಎಂದು ಹೆದರಿ ಈ ಕೆಲಸ ಮಾಡುತ್ತಿಲ್ಲ. ನನಗೆ ಜನರ ಸಂಕಷ್ಟ ಪರಿಹಾರ ಆಗಬೇಕು. ಅಲ್ಲದೆ ನಾನು ಯಾರ ಮುಂದೆಯೂ ಭಿಕ್ಷೆ ಕೇಳುವುದಿಲ್ಲ. ಫೋನ್ ಟ್ಯಾಪಿಂಗ್, ಐಎಮ್ ಎ ಯಾವುದೇ ತನಿಖೆ ಮಾಡಲಿ ನಾನು ಸಿದ್ದ, ಅಲ್ಲದೆ ಐಎಮ್ ಎ ಮತ್ತು ನನಗೂ ಯಾವುದೇ ಸಂಬಂಧವಿಲ್ಲ ಎಂದರು.
ನನಗೆ ಅನ್ಯ ರಾಜಕಾರಣಿಗಳ ಜೊತೆಗೆ ಹೋಲಿಸಬೇಡಿ. ನಾನೇ ಬೇರೆ, ಭಾವನಾತ್ಮಕ ರಾಜಕಾರಣಿ, ಸ್ವಲ್ಪ ಮಟ್ಟಿಗೆ ಮಾನವೀಯತೆ ಇಟ್ಟುಕೊಂಡಿರುವ ರಾಜಕಾರಣಿ, ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ನಿರ್ಧಾರ ಮಾಡಿದ್ದೆ. ಆದರೆ ನನ್ನ ನಂಬಿದ ಬಡ ಜನರಿಗಾಗಿ ಮತ್ತೆ ರಾಜಕಾರಣದಲ್ಲಿ ಮುಂದುವರೆಯಲು ನಿರ್ಧಾರ ಮಾಡಿದ್ದೇನೆ ಎಂದರು.