ಕರ್ನಾಟಕ

karnataka

ETV Bharat / state

ಆಪರೇಷನ್ ಕಮಲ ಕೂಡಾ ಸಿಬಿಐ ತನಿಖೆಗೆ ನೀಡಲಿ: ಸಿದ್ದರಾಮಯ್ಯ

ಫೋನ್​ ಕದ್ದಾಲಿಕೆ ಪ್ರಕರಣವನ್ನು ಅಮಿತ್ ಶಾ ಸೂಚನೆ ಮೂಲಕ‌ ಸಿಬಿಐಗೆ ನೀಡಿದ್ದಾರೆ. ಸುಮ್ಮನೆ ಯಡಿಯೂರಪ್ಪನವರು ನನ್ನ ಹೆಸರು ಹೇಳುತ್ತಾರೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿ, ಯಾವುದೇ ರಾಜಕೀಯ ದುರುದ್ದೇಶ ಇರಬಾರದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸಿದ್ದರಾಮಯ್ಯ

By

Published : Aug 19, 2019, 11:51 AM IST

ಹುಬ್ಬಳ್ಳಿ:ಫೋನ್​ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಎಂ ಯಡಿಯೂರಪ್ಪನವರು ನನ್ನ ಸಲಹೆ ಮೇರೆಗೆ ಸಿಬಿಐಗೆ ನೀಡಲಾಗಿದೆ ಎಂದು ಹೇಳಿರುವುದು ನೂರಕ್ಕೆ ನೂರು ಸುಳ್ಳು. ನನ್ನ ಸಲಹೆ ಕೇಳೋದಾದ್ರೆ ಆಪರೇಷನ್ ಕಮಲ ಕೂಡಾ ಸಿಬಿಐ ತನಿಖೆಗೆ ನೀಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಫೋನ್​ ಕದ್ದಾಲಿಕೆ ಪ್ರಕರಣವನ್ನು ಅಮಿತ್ ಶಾ ಸೂಚನೆ ಮೂಲಕ‌ ಸಿಬಿಐಗೆ ನೀಡಿದ್ದಾರೆ. ಸುಮ್ಮನೆ ಯಡಿಯೂರಪ್ಪನವರು ನನ್ನ ಹೆಸರು ಹೇಳುತ್ತಾರೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿ, ಯಾವುದೇ ರಾಜಕೀಯ ದುರುದ್ದೇಶ ಇರಬಾರದು ಎಂದರು.

ಆಪರೇಷನ್ ಕಮಲದಲ್ಲೂ ಕೂಡ ಕೋಟ್ಯಂತರ ರೂ. ಹಗರಣ ನಡೆದಿದೆ. ಈ ಬಗ್ಗೆ ಕೆಲವು ಶಾಸಕರು ಖುದ್ದು ಹೇಳಿದ್ದಾರೆ. ಫೋನ್ ಟ್ಯಾಪಿಂಗ್ ಕೇಸ್​​​ನಲ್ಲಿ ಆಪರೇಷನ್ ಕಮಲದ ಬಗ್ಗೆ ಬಿಜೆಪಿ ತನಿಖೆ ಮಾಡಿಸಲ್ಲ. ಬಿಎಸ್​​ವೈ ಆಡಿಯೋ ಪ್ರಕರಣದ ಬಗ್ಗೆ ಎಸ್​​ಐಟಿ ತನಿಖೆ ನಡೆಸಬೇಕಿತ್ತು. ಆವಾಗಲೇ ಆಪರೇಷನ್ ಕಮಲದ ಬಗ್ಗೆ ಗೊತ್ತಾಗುತ್ತಿತ್ತು. ಆದರೆ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಹಾಗೆ ಮಾಡಲಿಲ್ಲ ಎಂದು ಹೇಳಿದರು.

ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐಗಿಂತ, ನಮ್ಮ ಪೊಲೀಸರಿಂದಲೇ ತನಿಖೆ ನಡೆಸಬಹುದಿತ್ತು. ಎಸ್​​ಐಟಿ, ಸಿಐಡಿ ಇದೆ. ಈ ಹಿಂದೆ ಸಿಬಿಐ ವಿಚಾರಣೆ ಅಂದರೆ ವಿರೋಧ ವ್ಯಕ್ತಪಡಿಸುತ್ತಿದ್ದ ಬಿಜೆಪಿಗೆ ಇದೀಗ ಸಿಬಿಐ ಮೇಲೆ ವ್ಯಾಮೋಹ ಬಂದಿದೆ. ಸಿಬಿಐಯನ್ನ ದುರ್ಬಳಕೆ ಮಾಡಿಕೊಳ್ಳುವುದು ಬಿಜೆಪಿ ಪ್ಲಾನ್​ ಅಂತಾ ಆರೋಪ ಮಾಡಿದರು.

ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ

ಪ್ರವಾಹ ಬಂದು 15 ಕಳೆಯಿತು. ಕೇಂದ್ರದಿಂದ ಒಂದೇ ಒಂದು ರೂಪಾಯಿ ಬಂದಿಲ್ಲ. ಯಡಿಯೂರಪ್ಪ ಒನ್ ಮ್ಯಾನ್ ಶೋ ಮಾಡಿಕೊಂಡು ತಿರುಗಾಡುತ್ತಿದ್ದಾರೆ. ಕೇಂದ್ರದಲ್ಲಿ ಅವರದೇ ಸರ್ಕಾರವಿದೆ. ಪ್ರವಾಹದ ಬಗ್ಗೆ ಖುದ್ದು ನರೇಂದ್ರ ಮೋದಿಯವರನ್ನ ಭೇಟಿ ಮಾಡಿ ಬಂದಿದ್ದಾರೆ. ಆದರೆ ಅವರು ಎಲ್ಲೂ ಕೂಡಾ ಒಂದು ರೂಪಾಯಿ ಕೊಡ್ತಿನಿ ಅಂತ ಹೇಳಿಲ್ಲ. 2009ರಲ್ಲಿ ಪ್ರವಾಹ ಬಂದಾಗ ಕರ್ನಾಟಕ್ಕೆ ಬಂದಿದ್ದಾಗ ಆಗಿನ ಪಿಎಂ ಮನಮೋಹನ್ ಸಿಂಗ್ ಸ್ಥಳದಲ್ಲೇ 1600 ಕೋಟಿ ಘೋಷಣೆ ಮಾಡಿದ್ದರು ಎಂದರು.

ಆದರೆ ಯಡಿಯೂರಪ್ಪ ಈವರೆಗೂ ಕೇಂದ್ರಕ್ಕೆ ಮನವಿಯನ್ನೇ ಸಲ್ಲಿಸಿಲ್ಲ. ನರೇಂದ್ರ ಮೋದಿ, ಅಮಿತ್ ಶಾ ಕಂಡರೆ ಯಡಿಯೂರಪ್ಪ ಗಡ ಗಡ ನಡುಗುತ್ತಾರೆ. ಪಾಪ ಅವರಿಗೆ ಸಿಕ್ಕಾಪಟ್ಟೆ ಭಯ. ಯಾಕೆ ಭಯ ಅಂತ ಯಡಿಯೂರಪ್ಪ, ಶೆಟ್ಟರ್ ಹೇಳಬೇಕು. ಹೀಗಾಗಿ ಅವರಿಗೆ ಭಯವಿದ್ದರೆ ನಮ್ಮನ್ನಾದರೂ ಮೋದಿ ಹತ್ತಿರ ಕರೆದುಕೊಂಡು ಹೋಗಲಿ, ನಾವು ಕೇಳುತ್ತೇವೆ. ನನ್ನ ಪ್ರಕಾರ ಪ್ರವಾಹದಿಂದ 1 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚು ನಷ್ಟವಾಗಿದೆ ಎಂದು ಹೇಳಿದರು.

ನನ್ನ ಕಣ್ಣು ಆಪರೇಷನ್ ಮಾಡಿಸಿಕೊಂಡಿದ್ದೆ. ಹೀಗಾಗಿ ಪ್ರವಾಹಪೀಡಿತ ಸ್ಥಳಕ್ಕೆ ಬರಲು ತಡವಾಯಿತು. ಇಲ್ಲದಿದ್ದರೆ ಯಾರಿಂದಲೂ ಹೇಳಿಸಿಕೊಳ್ಳವವನು ನಾನಲ್ಲ. ಅದಕ್ಕಾಗಿ ನನ್ನ ಮಗನನ್ನ ಕಳುಹಿಸಿದ್ದೆ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.

ಬಿಎಸ್​​​ವೈಗೆ ಮಂತ್ರಿ ಮಂಡಲ ಮಾಡಲು ಸಂವಿಧಾನಬದ್ಧ ಅಧಿಕಾರವಿದೆ. ಆದರೂ ಅವರು ಅಮಿತ್ ಶಾರ ಮರ್ಜಿಯಲ್ಲಿದ್ದಾರೆ. ಹೀಗಾಗಿ ಬಿಜೆಪಿಯಲ್ಲೂ ಕೇಂದ್ರಿಕೃತ ಅಧಿಕಾರವಿದೆ. ಅನರ್ಹ ಶಾಸಕರ ಕೇಸ್ ಸುಪ್ರೀಂನಲ್ಲಿದೆ. ನೋಡೋಣ, ನಾವು ಪಿಟಿಷನ್ ಹಾಕಿದ್ದೇವೆ ಎಂದರು.

ABOUT THE AUTHOR

...view details