ಧಾರವಾಡ:ಸುವರ್ಣ- ಕರ್ನಾಟಕ ಕಾರಿಡಾರ್(ಬಿಎಂಇಸಿ) ಸಲುವಾಗಿ ಭೂಮಿ ಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಭೂಮಿ ಉಳಿಸಿ ಹೋರಾಟ ಸಮಿತಿ ಹಾಗೂ ರೈತ ಕೃಷಿ ಕಾರ್ಮಿಕರ ಸಂಘಟನೆಗಳು ಧಾರವಾಡದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿ, ಜಿಲ್ಲಾಧಿಕಾರಿಗಳು ಹಾಗೂ ಕೆಐಎಡಿಬಿ ಅಧಿಕಾರಿಗಳಿಗೆ ಮನವಿ ಸಲ್ಲಿಕೆ ಮಾಡಲಾಯಿತು.
ವಿವಿಧ ಗ್ರಾಮದ ರೈತರು ಪ್ರತಿಭಟನೆ ಧಾರವಾಡ ತಾಲೂಕಿನ 14 ಗ್ರಾಮದ ರೈತರ ಭೂಮಿಯನ್ನ ಸುವರ್ಣ ಕರ್ನಾಟಕ ಕಾರಿಡಾರ್(ಬಿಎಂಇಸಿ) ಸಲುವಾಗಿ ಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭಗೊಂಡಿದ್ದು, ಅದಕ್ಕಾಗಿ ರೈತರಿಗೆ ನೋಟಿಸ್ ಬರಲು ಆರಂಭಗೊಂಡಿವೆ. ಪ್ರಮುಖವಾಗಿ ಶಿಂಗನಹಳ್ಳಿ, ಕುಮ್ಮ ನಾಯಕನಕೊಪ್ಪ, ಕೋಟೂರು, ಗುಳೇದಕೊಪ್ಪ, ಮದಿಕೊಪ್ಪ ಸೇರಿದಂತೆ ತಾಲೂಕಿನ 14 ಗ್ರಾಮದ ಅವಶ್ಯಕ ಜಮೀನನ್ನು ರೈತರಿಗೆ ಮಾಹಿತಿ ನೀಡದೇ ನೋಟಿಸ್ ನೀಡಿದೆ ಎಂದು ಆರೋಪ ಕೂಡ ಕೇಳಿ ಬಂದಿದೆ.
ಪ್ರಾಣಬೇಕಾದರೂ ಕೊಟ್ಟೆವು, ಇಂಚು ಭೂಮಿ ಕೊಡುವುದಿಲ್ಲ ಎಂದು ಘೋಷಣೆ ಕೂಗಿ ಸರ್ಕಾರದ ವಿರುದ್ಧ ತಮ್ಮ ಆಕ್ರೊಶ ಹೊರಹಾಕಿದರು. ಜತೆಗೆ 14 ಹಳ್ಳಿಗಳ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಆಗ್ರಹಿಸಿದವು. . ಧಾರವಾಡ ಕಲಾಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ವಿವಿಧ ವೃತ್ತಗಳ ಮೂಲಕ ಆಗಮಿಸಿದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಕೆಲಹೊತ್ತು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ ಮಾಡಿದರು.
ಭೂಸ್ವಾಧೀನ ವಿರೋಧಿಸಿ ರೈತರ ಪ್ರತಿಭಟನೆ ಈ ವೇಳೆ ಮಾತನಾಡಿದ ಅವರು, ಇದರ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಕೆಐಎಡಿಬಿ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ ರೈತರೊಂದಿಗೆ ಸಭೆ ನಡೆಸಲಾಗುವುದು ಎಂದರು. ಕೆಐಎಡಿಬಿ ಭೂಸ್ವಾಧ್ವೀನ ಅಧಿಕಾರಿಗಳ ಪರವಾಗಿ ಮಾತನಾಡಿದ ಕಚೇರಿ ವ್ಯವಸ್ಥಾಪಕರು, ಸರ್ಕಾರದ ನಿರ್ದೇಶನದಂತೆ ನೋಟಿಸ್ ನೀಡಲಾಗಿದ್ದು, ಇದಕ್ಕೆ ವಿರೋಧ ಇರುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಪ್ರತಿಭಟನಾ ರ‍್ಯಾಲಿಯಲ್ಲಿ ರೈತ ಕೃಷಿ ಕಾರ್ಮಿಕರ ಸಂಘಟನೆ ಜಿಲ್ಲಾಧ್ಯಕ್ಷ ಲಕ್ಷ್ಮಣ ಜಡಗನ್ನವರ, ಧಾರವಾಡ ಕಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ವಿಠಲ ಪೀರಗಾರ, ಗ್ರಾಮ ಪಂಚಾಯ್ತಿ ಸದಸ್ಯ ರಮೇಶ ಹೊಸಮನಿ, ರೈತರಾದ ಮಂಜುನಾಥ್ ಚವ್ಹಾಣ ಸೇರಿದಂತೆ ಅನೇಕ ರೈತರು ಭಾಗಿಯಾಗಿದ್ದರು.