ಹುಬ್ಬಳ್ಳಿ:ಅವಳಿ ನಗರದಲ್ಲಿ ಜನ ಭಯದಿಂದಲೇ ಜೀವನ ನಡೆಸುತ್ತಿದ್ದಾರೆ. ದಿನೆ ದಿನೇ ನಗರದಲ್ಲಿ ಹಾಡಹಗಲೆ ಕೊಲೆ, ಸುಲಿಗೆ, ದರೋಡೆಗಳು ಹೆಚ್ಚಾಗುತ್ತಿವೆ. ಇತ್ತ ಗಾಂಜಾ, ಡ್ರಗ್ಸ್ ಮಾರಾಟ, ಆನ್ಲೈನ್ ವಂಚನೆ, ಶೂಟೌಟ್ ಸೇರಿದಂತೆ ರೌಡಿಗಳ ಅಟ್ಟಹಾಸ ಮಿತಿಮೀರಿದೆ. ಇಂತಹ ಕ್ರಿಮಿನಲ್ ಪ್ರಕರಣಗಳಿಗೆ ಕಡಿವಾಣ ಹಾಕಬೇಕಿದ್ದ ಪೊಲೀಸ್ ಇಲಾಖೆ ಸಿಬ್ಬಂದಿ ಕೊರತೆಯಿಂದ ಕೈಕಟ್ಟಿ ಕುಳಿತಿದೆ.
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ, ಪಿಎಸ್‌ಐ ಹುದ್ದೆಗಳ ಕೊರತೆ ಎದ್ದು ಕಾಣುತ್ತಿದೆ. ಕಮಿಷನರೇಟ್ ವ್ಯಾಪ್ತಿಯಲ್ಲಿ ಮಂಜೂರಾಗಿರುವ 53 ಪಿಎಸ್ಐ ಹುದ್ದೆಗಳ ಪೈಕಿ 22 ಮಾತ್ರ ಭರ್ತಿಯಾಗಿದ್ದು, ಬರೋಬ್ಬರಿ 31 ಪಿಎಸ್ಐ ಹುದ್ದೆಗಳು ಖಾಲಿ ಇವೆ. ಇದರಿಂದ ಇದ್ದ ಪಿಎಸ್ಐಗಳಿಗೆ ಕೆಲಸದೊತ್ತಡ ಹೆಚ್ಚಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ 15 ಠಾಣೆ, 4 ಸಂಚಾರಿ ಠಾಣೆ, 2 ವಿಶೇಷ ಪೊಲೀಸ್ ಠಾಣೆಗಳಿದ್ದು ಬಹುತೇಕ ಠಾಣೆಗಳಲ್ಲಿ ಒಬ್ಬರೇ ಪಿಎಸ್ಐ ಕಾರ್ಯ ನಿರ್ವಹಿಸುತ್ತಿದ್ದು, ಇನ್ನೂ ಕೆಲವು ಠಾಣೆಗಳಿಗೆ ಪಿಎಸ್ಐಗಳೇ ಇಲ್ಲ.
ಕಮಿಷನರೇಟ್ ವ್ಯಾಪ್ತಿಯಲ್ಲಿ ಪಿಎಸ್ಐ ಕೊರತೆಯಿಂದ ಇನ್ಸ್‌ಪೆಕ್ಟರ್‌ಗಳೇ ಎಲ್ಲಾ ಜವಾಬ್ದಾರಿ ನಿರ್ವಹಿಸಬೇಕಾಗಿದೆ. ಸಿಬ್ಬಂದಿ ಕೊರತೆಯಿಂದ ಬೀಟ್ ಸಿಸ್ಟಮ್ ನಿರ್ವಹಣೆ ಕಷ್ಟಕರವಾಗಿದ್ದು, ಪಿಎಸ್ಐ ಕೊರತೆಯಿಂದಾಗಿ ನೈಟ್‌ಬೀಟ್, ಪೆಟ್ರೋಲಿಂಗ್, ಬಂದೋಬಸ್ತ್ ಹಾಗೂ ಅಪರಾಧ ಪ್ರಕರಣಗಳ ತನಿಖೆಗೆ ಹಿನ್ನೆಡೆಯಾಗುತ್ತಿವೆ. ಒಮ್ಮೆ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಯೋಜನೆಗೊಂಡರೆ 7 ವರ್ಷಗಳ ಕಾಲ ವರ್ಗಾವಣೆ ಅಸಾಧ್ಯ ಎನ್ನುವ ಕಾರಣಕ್ಕೆ ಪಿಎಸ್ಐ ಗಳು ನಗರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.